ಮಂಗಳೂರು : ಅಪರಿಚಿತರು ವಿಷ ತಿನ್ನಿಸಿದ ಪರಿಣಾಮ ಒಂದು ಜಾನುವಾರು ಹಾಗೂ ಒಂಬತ್ತು ಬೀದಿ ನಾಯಿಗಳು ಸಾವನ್ನಪ್ಪಿರುವ ಘಟನೆ ತಲಪಾಡಿಯ ಆಲನಕಾರುಗುಡ್ಡೆ ಎಂಬಲ್ಲಿ ನಡೆದಿದೆ. ಈ ಘಟನೆ ಗುರುವಾರ ಆಗಸ್ಟ್ 17 ರಂದು ಬೆಳಕಿಗೆ ಬಂದಿದೆ. ಸತ್ಯೇಂದ್ರ ಎಂಬುವವರಿಗೆ ಹಾಲು ಕೊಡುತ್ತಿದ್ದ ಹಸು ಸಾವನ್ನಪ್ಪಿದ್ದು, ಎರಡು ದಿನಗಳಲ್ಲಿ ಒಂಬತ್ತು ಬೀದಿ ನಾಯಿಗಳು ಸಾವನ್ನಪ್ಪಿವೆ. ಈ ಹಿಂದೆ ರಸ್ತೆ ಬದಿಯಲ್ಲಿ ಅಪರಿಚಿತರು ಪ್ರಾಣಿಗಳಿಗೆ ವಿಷ ತಿನ್ನಿಸುತ್ತಿದ್ದುದನ್ನು ಕೆಲವರು ನೋಡಿದ್ದರು. ಕೆಲವು ಸತ್ತ ನಾಯಿಗಳನ್ನು ಹೂಳಿದರೆ, ಇನ್ನು ಕೆಲವು ಶವಗಳು ಕೊಳೆತವಾಗಿದ್ದು, ಆ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


