ಮಂಗಳೂರು : ಇತ್ತೀಚೆಗೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “Kalyug Kalki Post” ಎಂಬ ಶೀರ್ಷಿಕೆಯಡಿ ಹರಿದಾಡುತ್ತಿರುವ ಒಂದು ದುರುದ್ದೇಶಪೂರಿತ ಹಾಗೂ ಪ್ರಚೋದನಾತ್ಮಕ ಪೋಸ್ಟ್ ಸಾರ್ವಜನಿಕ ಗಮನ ಸೆಳೆದಿದೆ. ಈ ಪೋಸ್ಟ್ನಲ್ಲಿರುವ ವಿಷಯವು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹದ್ದಾಗಿದ್ದು, ಸಮಾಜದಲ್ಲಿ ಅಶಾಂತಿ, ವೈಮನಸ್ಸು ಹಾಗೂ ಶಾಂತಿ ಭಂಗಕ್ಕೆ ಕಾರಣವಾಗುವ ಅಪಾಯವನ್ನು ಹೊಂದಿದೆ.


ಸಾಮಾಜಿಕ ಮಾಧ್ಯಮಗಳಂತಹ ಸಾರ್ವಜನಿಕ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು ಅಪಪ್ರಚಾರ ನಡೆಸುವುದು ಕಾನೂನುಬಾಹಿರವಾಗಿದ್ದು, ಇದು ಸಮಾಜದ ಸಾಮರಸ್ಯ ಮತ್ತು ಸಹಬಾಳ್ವೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಕಾನೂನಿನ ಪ್ರಕಾರ ಸೂಕ್ತ ತನಿಖೆ ಹಾಗೂ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ದುರುದ್ದೇಶಪೂರಿತ ಅಪಪ್ರಚಾರ ಮಾಡುವವರಿಗೆ ಬುದ್ಧಿ ನೀಡುವಂತೆ, ಹಾಗೂ ಸಮಾಜದಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆ ನೆಲೆಗೊಳ್ಳುವ ಉದ್ದೇಶದಿಂದ, ನಾಳೆ ಸಂಜೆ 6 ಗಂಟೆಗೆ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುವುದು. ಈ ಅಪಪ್ರಚಾರಕ್ಕೆ ಕಾರಣರಾದವರು ಅಥವಾ ಇದರಲ್ಲಿ ಭಾಗಿಯಾದವರು, ಆತ್ಮಾವಲೋಕನದ ಮನಸ್ಸಿನಿಂದ ಆ ಸಮಯದಲ್ಲಿ ಗರೋಡಿ ಕ್ಷೇತ್ರಕ್ಕೆ ಆಗಮಿಸಿ, ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಈ ಮೂಲಕ ತಿಳಿಯಪಡಿಸಲಾಗಿದೆ
ಸಮಾಜದ ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ ಅವುಗಳನ್ನು ಸಂಯಮ, ಸಂಸ್ಕೃತಿ ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ವ್ಯಕ್ತಪಡಿಸುವುದೇ ನಾಗರಿಕ ಧರ್ಮ, ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಜಾತ್ರೋತ್ಸವ ಪ್ರಯುಕ್ತ ನಡೆಯುವ ಕೋಳಿ ಅಂಕದ ಕುರಿತು, ಆಡಳಿತ ಯಂತ್ರವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕೋಳಿ ಅಂಕವನ್ನು ತಡೆಯುವಂತೆ ಯಾವುದೇ ಒತ್ತಡ ಪ್ರಯೋಗಿಸಲಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟವಾಗಿ ಪ್ರಮಾಣೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


