ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹೊರೆಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನೆ ನೆರವೇರಿತು. ಶರವು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟನೆ ನೆರವೇರಿಸಿ, ದೇವತಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಮಾರಿಯಮ್ಮನ ಕೃಪೆಗೆ ಪಾತ್ರರಾಗೋಣ. ಯಾವುದೇ ಕಾರ್ಯ ಆರಂಭ ಮಾಡುವಾಗ ಗಣಪತಿಯ ಸ್ಮರಣೆ ಅಗತ್ಯ. ಹೀಗಾಗಿ ಶರವು ದೇವಸ್ಥಾನದಲ್ಲಿ ಗಣಪತಿಯನ್ನು ಸ್ಮರಿಸಿ ಕಾಪು ಕ್ಷೇತ್ರಕ್ಕೆ ದಕ್ಷಿಣ ವಾಹಿನಿಯ ಹೊರೆಕಾಣಿಕೆ ಕಚೇರಿ ಶರವು ಕ್ಷೇತ್ರದಲ್ಲಿ ಉದ್ಘಾಟನೆಗೊಂಡು ಹೊರೆ ಕಾಣಿಕೆಗೆ ಚಾಲನೆ ನೀಡಲಾಗಿದೆ. ಫೆ. 25 ರಿಂದ ಮಾರ್ಚ್ 5 ರ ವರೆಗೆ ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸೋಣ ಎಂದರು.
ಬಳಿಕ ಮಾತನಾಡಿದ ಹಸಿರುವಾಣಿ ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿಯವರು ಕಾಪುವಿನ ಅಮ್ಮನ ದೇವಾಲಯ ದಕ್ಷಿಣ ಭಾರತದಲ್ಲಿ ಅತೀ ಸುಂದರವಾಗಿ ಧಾರ್ಮಿಕ ಕ್ಷೇತ್ರ ಕ್ಕೆ ಮೆರುಗುನೀಡುವ ವಾಸ್ತುವಿಗೆ ಅನುಗುಣವಾಗಿ ದೇವಸ್ಥಾನದ ಕಾಮಗಾರಿ ನಡೆಯುತ್ತಿದ್ದು ಕವಚ,ಗಂಟೆ, ತಿರುಪತಿ ಮಾದರಿಯ ಗೋಪುರ, ವಿಶಾಲವಾದ ಅನ್ನಚತ್ರ, ಭದ್ರತೆಯ ಹುಂಡಿ, ಮೂಸಿಯಮ್, ಹೈಟೆಕ್ ಶೌಚಾಲಯ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾರಿಯಮ್ಮನ ದೇವಾವಾಕ್ಯದ ಪ್ರಕಾರ ಕೆಲಸ ನಡೆಯುತ್ತದೆ, ವಿಶೇಷ ವಿಮಾನದ ಮೂಲಕ ಗಂಗಾ ಜಲ ಬರಲಿದ್ದು, 9 ದಿನದ ಬ್ರಹ್ಮ ಕಲಸದಲ್ಲಿ 9 ರೀತಿಯ ಕಾರ್ಯನಡೆಯಲಿದೆ. 18 ರಾಷ್ಟ್ರದಲ್ಲಿ ಜಿರ್ಣೋದ್ದಾರ ಸಮಿತಿ ರಚಿಸಲಾಗಿದೆ. ಸುಳ್ಯದಿಂದ ಮುಲ್ಕಿಯವರೆಗೆ ಎಲ್ಲಾ ಭಜನಾ ಮಂಡಳಿಯ ಮೂಲಕ ಸಭೆ ನಡೆದು ಎಲ್ಲಾ ಜನರಿಗೆ ತಲುಪಿಸುವಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಅಮ್ಮನವರ ಇಚ್ಚೆಯಂತೆ ಎಲ್ಲಾ ಕೆಲಸ ಕಾರ್ಯಗಳು ಪರಿಪೂರ್ಣ ಗೊಂಡಿದ್ದು ಫೆ.25 ರಂದು ಇತಿಹಾಸ ನಿರ್ಮಿಸಲಿದೆ ಎಂದು ಹೇಳಿದರು. ಶ್ರೀ ಕ್ಷೇತ್ರಕ್ಕೆ ಎಲ್ಲಾ ಕಡೆಗಳಿಂದ ಬರುವ ಹೊರಕಾಣಿಕೆ ಈ ಶರವು ದೇವಸ್ಥಾನ ಕೇಂದ್ರ ಬಿಂದುವಾಗಲಿದ್ದು ಈ ಪುಣ್ಯ ಕಾರ್ಯಕ್ಕೆ ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ,ಪುತ್ತೂರು,ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಹಾಗೂ ಆ ಭಾಗದ ವಿವಿಧ ಪ್ರದೇಶಗಳಿಂದ ಹಸಿರು ಹೊರಕಾಣಿಕೆ ಬರಲಿದೆ ಹಾಗೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿಯವರು ವಿನಂತಿಸಿದರು.
ಸಮಾರಂಭದಲ್ಲಿ ಐಕಳ ಬಾವ ಚಿತ್ತರಂಜನ್ ಭಂಡಾರಿ, ದೀಕ್ಷಿತ್ ಭಂಡಾರಿ ಉಳ್ಳಾಲಗುತ್ತು, ಚಂದ್ರಹಾಸ ಶೆಟ್ಟಿ ರಂಗೋಲಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಅರುಣ್ ಶೆಟ್ಟಿ ಪಾದೂರು, ಮಿಥುನ್ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಜಯಪ್ರಕಾಶ್ ರೈ ಸುಳ್ಯ, ಸಿಎ ಶಾಂತಾರಾಮ ಶೆಟ್ಟಿ, ಶೆಡ್ಡೆ ಸಂತೋಷ್ ಶೆಟ್ಟಿ, ಪದವು ಮೇಗಿನ ಮನೆ ಉಮೇಶ್ ರೈ, ಬಾಲಕೃಷ್ಣ ಶೆಟ್ಟಿ ಬಾಳ, ಚಂದ್ರಶೇಖರ ಉಚ್ಚಿಲ, ಸುಕೇಶ್ ಚೌಟ ಉಳ್ಳಾಲಗುತ್ತು, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಸುಧಾಕರ ರಾವ್ ಪೇಜಾವರ, ಆನಂದ ಶೆಟ್ಟಿ ತೊಕ್ಕೊಟ್ಟು, ಸಂದೀಪ್ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.