ಮಂಗಳೂರು : ವಿಹೆಚ್‌ಪಿ ನೇತೃತ್ವದಲ್ಲಿ ಧರ್ಮಾಗ್ರಹ ಸಭೆಯು ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದಿದೆ. ಪ್ರಮುಖ ಧಾರ್ಮಿಕ ಮುಖಂಡರು ಹಾಗೂ ಸಂತರುಗಳು ಮತ್ತು ದೇವಸ್ಥಾನಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.
ತಿರುಪತಿ ವೆಂಕಟರಮಣ ದೇವರ ಲಡ್ಡು ಪ್ರಸದಾದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆಯಿಂದ ಕೂಡಿದ ತುಪ್ಪ ಬಳಕೆ ಮಾಡಿರುವ ವಿಚಾರವಾಗಿ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು. ಇದಕ್ಕೆ ಕಾರಣವಾಗಿರುವ ವ್ಯಕ್ತಿಗಳ ಮೆಲೆ ಕಾನೂನು ಕ್ರಮ ಜರುಗಿಸಲು ಸಿಬಿಐ ತನಿಖೆ ನಡೆಸಬೇಕು ಎಂದು ಆಂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಒತ್ತಾಯಿಸುವ ತೀರ್ಮಾನ ಕೈಗೊಳ್ಳಲಾಯಿತು. ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು, ದೇವರ ನೈವೇದ್ಯಕ್ಕೆ ಬೇಕಾದ ತುಪ್ಪವನ್ನು ತಯಾರಿಸಲು ದೇವಸ್ಥಾನದಲ್ಲೇ ಗೋ ಶಾಲೆ ಆರಂಭಿಸುವ ಕುರಿತು ಒತ್ತಾಯಿಸಲಾಯಿತು.
ತಿರುಪತಿ ದೇವಸ್ಥಾನದಲ್ಲಿ 25 ಸಾವಿರ ದೇಸಿ ಹಸುಗಳಿರುವ ಗೋಶಾಲೆ ಹಾಗೂ ಇತರ ದೇವಸ್ಥಾನಗಳಲ್ಲೂ ಗೋಶಾಲೆಗಳನ್ನು ನಿರ್ಮಾಣ ಮಾಡಲು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಾಯಿತು. ಸರ್ಕಾರದ ಹಿಡಿತದಲ್ಲಿರುವ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸಲು ಒತ್ತಾಯಿಸುವುದು, ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸ್ಥಾಪಿಸುವ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.