ಮಂಗಳೂರು ; ಕಳೆದ 4 ವರ್ಷಗಳಿಂದ ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿ ಸನ್ನಿಧಿಗೆ ಪಾದಯಾತ್ರೆ ನಡೆಸುವುದರ ಮೂಲಕ ದೈವ ದೇವರುಗಳ ಬಗ್ಗೆ ಭಕ್ತಿ, ಶ್ರದ್ಧೆ ಮೂಡಿಸುವ ಪವಿತ್ರ ಕಾರ್ಯ ಮಾಡಿದ್ದು. ಹಿಂದೂ ವಿರೋಧಿ ಕೃತ್ಯಗಳು ಮಾಯವಾಗಿ, ಸಮಸ್ತ ಹಿಂದೂ ಸಮಾಜ ಐಕ್ಯತೆಯ ಜೊತೆಗೆ ಲೋಕಕಲ್ಯಾಣದ ಸದುದ್ದೇಶದಿಂದ ತಾ. 9-3-2025 ಆದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನ ವರೆಗೆ ನಡೆಯುವ ಪಾದಯಾತ್ರೆ ನಡೆಸಲಾಗುತ್ತದೆಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರ್ ತಿಳಿಸಿದ್ದಾರೆ.
”ನಮ್ಮ ಸಂಘಟನೆಯ ಕಾರ್ಯಕರ್ತರು ಪಾದಯಾತ್ರೆ ಸಾಗಿಬರುವ ವಿವಿಧ ಕಡೆಗಳಲ್ಲಿ ಚಹಾ ತಿಂಡಿ ವ್ಯವಸ್ಥೆ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ದಿಕ್ಸೂಚಿ ಭಾಷಣವನ್ನು ಚಕ್ರವರ್ತಿ ಸೂಲಿಬೆಲೆ ಮಾಡಲಿದ್ದಾರೆ. ಕಾರ್ಯಕ್ರಮದ ಬಳಿಕ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ತಂಡದಿಂದ ಕೊರಗಜ್ಜನ ಕಾರಣಿಕ ಕುರಿತ ಯಕ್ಷಗಾನ ನಡೆಯಲಿದೆ“ ಎಂದರು.
”ವಿಶ್ವ ಹಿಂದೂ ಪರಿಷತ್ ಹಾಗೂ ಕೊರಗಜ್ಜನ ಕ್ಷೇತ್ರದ ಆಡಳಿತ ಮಂಡಳಿ ಸಹಕಾರದಲ್ಲಿ ಪಾದಯಾತ್ರೆ ನಡೆಯಲಿದ್ದು ಧಾರ್ಮಿಕ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು. 25000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ“ ಎಂದು ರವಿ ಅಸೈಗೋಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರವಿ ಅಸೈಗೋಳಿ,ಪ್ರವೀಣ್ ಕುತ್ತಾರ್,ದೇವಿಪ್ರಸಾದ್ ಶೆಟ್ಟಿಯವರು ಉಪಸ್ಥಿತರಿದ್ದರು.