ಮಂಗಳೂರು : ರಾಜ್ಯ ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರು ಪೊಲೀಸರು ದಾಖಲೆ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಡ್ರಗ್ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 75 ಕೋಟಿ ಮೌಲ್ಯದ MDMA ವಶಕ್ಕೆ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳೆಯರು ಈ ಮಾದಕ ವಸ್ತು ಸಾಗಾಟ ಮಾಡುತ್ತಿದ್ದು, ಆರೋಪಿಗಳನ್ನು ಬಂಧಿಸಿ ಅವರಿಂದ 37.870 ಕೆ.ಜಿ MDMA ಜಪ್ತಿ ಮಾಡಿಕೊಳ್ಳಲಾಗಿದೆ. 2024 ರಲ್ಲಿ ಪಂಪ್ ವೆಲ್ ಬಳಿ ಡ್ರಗ್ ಮಾರಾಟ ಮಾಡುತ್ತಿದ್ದ ಹೈದರ್ ಅಲಿಯನ್ನು ಬಂಧಿಸಲಾಗಿತ್ತು. ಬಳಿಕ ಹೈದರ್ ಅಲಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಬೆಂಗಳೂರಿನಲ್ಲಿದ್ದ ನೈಜೀರಿಯ ಪ್ರಜೆ ಪೀಟರ್ ಇಕೆಡಿ ಬೆಲ್ನಾವ್ ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣದ ಬೆನ್ನು ಬಿದ್ದಿದ್ದ ಮಂಗಳೂರು ಸಿಸಿಬಿ ಪೊಲೀಸರು ಪ್ರಮುಖ ಪೆಡ್ಲರ್ ಗಳ ಬಂಧನಕ್ಕೆ ನಿರಂತರ ಪರಿಶ್ರಮ ವಹಿಸಿದ್ದರು. ನಿರಂತರ ಆರು ತಿಂಗಳ ಪರಿಶ್ರಮದ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಹಾಗೂ ದೇಶದ ಇತರ ಕಡೆಗಳಿಗೆ MDMA ಸಾಗಾಟ ಮಾಡುವ ಜಾಲದ ಮಾಹಿತಿ ಲಭಿಸಿದೆ. ಬೃಹತ್ ಪ್ರಮಾಣದಲ್ಲಿ ವಿದೇಶಿ ಮಹಿಳಾ ಪ್ರಜೆಗಳು ವಿಮಾನ ಮಾರ್ಗದಲ್ಲಿ ಸಾಗಾಟ ಮಾಡುವ ಮಾಹಿತಿ ದೊರೆತಿದೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿ 75 ಕೋಟಿ ಮೌಲ್ಯದ ಡ್ರಗ್ ವಶ ಪಡಿಸಿಕೊಡಿದ್ದಾರೆ. ಡ್ರಗ್ ಸಾಗಾಟ ಮಾಡುತ್ತಿದ್ದ, ಬಾಂಬ ಫಾಂಟ ಹಾಗೂ ಅಬಿಗೇಲ್ ಅಡೋನಿಸ್ ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇದು ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆಯಾಗಿದ್ದು, ಸಿಸಿಬಿ ಪೊಲೀಸರ ಕಾರ್ಯಾಚರಣೆಯ ಬಗ್ಗೆ ನಗರ ಪೊಲೀಸ್ ಅಯುಕ್ತ ಅನುಪಮ್ ಅಗರ್ವಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ಕೋಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಡ್ರಗ್ ಮಾರಾಟಗಾರ ಬಂಧನವಾಗಿತ್ತು. ಆರೋಪಿಗಳಲ್ಲಿ ಮೂರು ಪಿಸ್ತೂಲ್ ಹಾಗೂ ಆರು ಸಜೀವ ಮದ್ದು ಗುಂಡುಗಳನ್ನು ಹಾಗೂ ಡ್ರಗ್ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆರೊಪಿಗಳ ಜಾಡು ಹಿಡಿದ ಪೊಲೀಸರಿಗೆ ಕಾಸರಗೋಡಿನ ಮಂಜೇಶ್ವರದ ಮೊರ್ತಾನಾ ಎಂಬಲ್ಲಿ ಅಡಗಿದ್ದ ಅಬ್ದುಲ್ ಫೈಜಲ್ ಎಂಬಾತ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಆತನ ಬಳಿ ಇದ್ದ ಒಂದು ಪಿಸ್ತೂಲ್ ಹಾಗೂ ಒಂದು ಸಜೀವ ಮದ್ದುಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರನ್ನು ಶೀಘೃವಾಗಿ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ತಿಳಿಸಿದ್ದಾರೆ.