ಮಂಗಳೂರು : ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಕ್ಫ್ ಬೋರ್ಡ್ ಭೂ ಹಗರಣವನ್ನು ಕಟುವಾಗಿ ಟೀಕಿಸಿದ್ದು, ನಡೆಯುತ್ತಿರುವ ವಿವಾದವನ್ನು “ಲ್ಯಾಂಡ್ ಜಿಹಾದ್” ಎಂದು ಬಣ್ಣಿಸಿದ್ದಾರೆ. “ಕಾಂಗ್ರೆಸ್ ಇನ್ನೂ ವಕ್ಫ್ ಅನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡು ವಸಾಹತುಶಾಹಿ ಮನಸ್ಥಿತಿಯಲ್ಲಿ ಸಿಲುಕಿಕೊಂಡಿದೆ” ಎಂದು ಚೌಟಾ ಆಕ್ರೋಶಹೊರಹಾಕಿದ್ದಾರೆ.

ದೇಶದಲ್ಲಿ ರಕ್ಷಣಾ ಇಲಾಖೆ ಹಾಗೂ ರೈಲ್ವೆ ಇಲಾಖೆ ಬಿಟ್ಟರೆ ಅತಿ ಹೆಚ್ಚು ಲ್ಯಾಂಡ್ ಬ್ಯಾಂಕ್ ಹೊಂದಿರುವುದು ವಕ್ಫ್ ಮಂಡಳಿ. ಸಮಾಸ್ತ ಹಿಂದು ಸಮಾಜ ಇಂದು ಭಯಭೀತಿ ವಾತಾವರಣದಲ್ಲಿ ಜೀವಿಸುವ ಸ್ಥಿತಿ ಎದುರಾಗಿದ್ದು, ವಿಜಯಪುರದಲ್ಲಿ ನಡೆದ ಘಟನೆಯಲ್ಲಿ ದೀಪಾವಳಿ ಸಂದರ್ಭ ಜನಭಯಭೀತರಾಗಿ ಕೆಲಸ ಮಾಡುವಂತಾಗಿದೆ. ಇಲ್ಲಿ 1200 ಎಕರೆ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೊಷಿಸಲು ಮುಂದಾಗಿದೆ. ಆದರೆ ಸಕಾಲದಲ್ಲಿ ರೈತರು ಹಾಗೂ ಬಿಜೆಪಿ ಎಚ್ಚೆತ್ತುಕೊಂಡ ಹಿನ್ನೆಲೆ ರಕ್ಷಿಸಲು ಸಾಧ್ಯವಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ವಕ್ಫ್ ಕಾನೂನು ಒಂದು ರೀತಿಯ ಮರಣ ಶಾಸನದ ರೀತಿಯಲ್ಲಿದೆ. ಇದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಂಡಿದ್ದು, ಅದರ ಕಾನೂನಿಗೆ ತಿದ್ದುಪಡಿ ತಂದಿದೆ. ಈ ಬಗ್ಗೆ ಇನ್ನಷ್ಟು ಸಮಗ್ರ ಚರ್ಚೆಯಾಗಿ ಒಳ್ಳೆಯ ಕಾನೂನು ತರಬೇಕೆಂದು ಜಂಟಿ ಸಮಿತಿಯನ್ನು ರೂಪಿಸಿದೆ. ಆದರೆ ಈ ರೀತಿ 50 ವರ್ಷದ ಹಿಂದಿನ ನೊಟೀಸನ್ನು ತರಾತುರಿಯಲ್ಲಿ ಜಾರಿಗೆ ತರುವ ಅಗತ್ಯವೇನಿತ್ತು ಎನ್ನುವುದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇದನ್ನು ಜಾರಿಗೆ ತರಲಾಗುತ್ತಿದೆ ಎಂದು ಅನ್ನಿಸುತ್ತಿದೆ. ಕಾಂಗ್ರೆಸ್ನ ರಾಜ್ಯ ಸರಕಾರ ಹಳೆ ಗಜೆಟ್ ನೊಟೀಸ್ ಜಾರಿಗೆ ತರುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ನುಡಿದರು.
ಕಳೆದ 24 ವರ್ಷಗಳಲ್ಲಿ 37 ಪ್ರಾಪರ್ಟಿಗಳು ವಕ್ಫ್ಗೆ ಹೋಗಿದ್ದು, ಶೇಕಡಾ 50ರಷ್ಟು ಸರಕಾರಿ ಜಮೀನು ಆಗಿದೆ. ಸರಕಾರಿ ಜಾಗವನ್ನು ವಕ್ಫ್ಗೆ ಕೊಡುವುದು, ಬಳಿಕ ಅದನ್ನು ಪ್ರಶ್ನಿಸುವ ಅಧಿಕಾರಕ್ಕೆ ಇರುವುದು ಟ್ರಿಬ್ಯೂನಲ್ಗೆ ಮಾತ್ರ. ಹೀಗಾಗಿ ಅದು ಕೊಟ್ಟ ಆದೇಶವನ್ನು ಪ್ರಶಸ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದರು. ಆದ್ದರಿಂದ ಕನಾ್ಟಕದಲ್ಲಿ ವಕ್ಫ್ ಆಸ್ತಿ ಗೋಲ್ ಮಾಲ್ ಆಗಿದೆ ಎನ್ನುವ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಸಲ್ಮಾನ ಸಮುದಾಯದ ಬಗ್ಗೆ ನಿಜವಾದ ಕಳಕಳಿ, ಕಾಳಜಿ ಇದ್ದರೆ ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಪ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯಲ್ಲಿ ಪಾಲ್ಗೊಂಡು ತಿದ್ದುಪಡಿ ಪ್ರಕ್ರಿಯೆಗಳಿಗೆ ಬೆಂಬಲ ನೀಡಲಿ. ವಕ್ಫ್ ಬೈ ಯೂಸರ್( ಬಳಕೆದಾರರಿಂದ ವಕ್ಪ್ ) ಪರಿಭಾಷೆಯಡಿ ಓರ್ವ ವ್ಯಕ್ತಿ ಯಾರದ್ದೋ ಭೂಮಿ ಬಳಕೆ ಮಾಡುತ್ತಿದ್ದು, ಅದನ್ನು ವಕ್ಪ್ ಕೊಟ್ಟರೆ ಅದರ ಮೂಲ ಮಾಲೀಕ ಕೂಡ ಟ್ರ್ಯಬುನಲ್’ಗೆ ಹೋಗಿ ಅದು ತನ್ನ ಆಸ್ತಿ ಎಂಬುದಾಗಿ ಹೋರಾಡಬೇಕಾದ ಒಂದು ವಿಚಿತ್ರ ಕಾನೂನು ವಕ್ಫ್ ಕಾಯ್ದೆ ಹೊಂದಿದೆ.
ಈ ಹಿನ್ನಲೆಯಲ್ಲಿ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸರ್ಕಾರವು, ಸರ್ಕಾರಿ ಭೂಮಿ ವಕ್ಪ್ ಗೆ ಹಸ್ತಾಂತರಿಸುವಂತಿಲ್ಲ ಮತ್ತು ವಕ್ಫ್ ಬೈ ಯೂಸರ್ ಎನ್ನುವ ಪರಿಭಾಷೆಯನ್ನು ತೆಗೆದು ಹಾಕಿ ಯಾರು ಉಪಯೋಗ ಮಾಡುತ್ತಿದ್ದಾರೆಯೋ ಅವರ ಆಸ್ತಿಯನ್ನು ವಕ್ಫ್’ಗೆ ನೀಡುವಂತಿಲ್ಲ ಎಂಬುದಾಗಿ ವಕ್ಫ್ ಕಾಯ್ದೆಗೆ ಮಹತ್ವದ ತಿದ್ದುಪಡಿ ತರುತ್ತಿದೆ.
ಈ ತಿದ್ದುಪಡಿಯಿಂದ ಧಾರ್ಮಿಕ ಚಟುವಟಿಕೆಗಳಿಗೆ, ಬಡವರಿಗೆ ಸಹಾಯ ಮಾಡಲು, ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಳಕೆಯಾಗಬೇಕಿದ್ದ ವಕ್ಪ್ ಭೂಮಿಯು ಇತರ ಕಾರಣಗಳಿಗೆ ದುರ್ಬಳಕೆಯಾಗುವುದಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದ್ದಾರೆ. ಇದು ನಮ್ಮ ಮುಖ್ಯ ನಿಲುವಾಗಿದ್ದು, ಆ ಮೂಲಕ ವಕ್ಫ್ ಹೆಸರಿನಲ್ಲಿ ಸರಕಾರದ, ಮುಸ್ಲಿಂ ಸಮುದಾಯದವರ ಆಸ್ತಿ ದುರ್ಬಳಕೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಹಾಗೂ ವಕ್ಫ್ ಕಾಯ್ದೆ ವಿರುದ್ಧದ ಬಿಜೆಪಿಯ ಹೋರಾಟವಾಗಿದೆ ಎಂದರು.


