ಮಂಗಳೂರು : ಪ್ರೀತಿಯ ಸಂಬಂಧದಲ್ಲಿ ಉಂಟಾದ ಮನಸ್ತಾಪ ಮತ್ತು ಮಾನಸಿಕ ಕಿರುಕುಳದ ಹಿನ್ನೆಲೆಯಲ್ಲಿ 22 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮೂಡುಶೆಡ್ಡೆ ಎದುರುಪದವು ನಿವಾಸಿ ಮುಹಮ್ಮದ್ ಆಶಿಕ್ (22) ಮಾರ್ಚ್ 21ರ ಮಧ್ಯರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರಂಭದಲ್ಲಿ ಸಾವಿನ ನಿಖರ ಕಾರಣ ತಿಳಿದಿರಲಿಲ್ಲ. ಆದರೆ ಮೊಬೈಲ್ ಪರಿಶೀಲನೆ ವೇಳೆ ಹಲವು ಮಹತ್ವದ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
ಆಶಿಕ್ ನಗರದ ಕೂಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ಅದೇ ಕಾಲೇಜಿನ ಉಳ್ಳಾಲ ನಿವಾಸಿ ಸಮೀಯ ಸಬಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ನಡುವೆ ಆಪ್ತ ಸಂಬಂಧವಿದ್ದರೂ, ಇತ್ತೀಚಿನ ದಿನಗಳಲ್ಲಿ ಯುವತಿ ಆಶಿಕ್ನಿಂದ ದೂರವಾಗಿದ್ದು, ಆತನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ಮೃತನ ತಂದೆ ಮುಹಮ್ಮದ್ ಹನೀಫ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, “ನೀನು ಎಲ್ಲಿಯಾದರೂ ಹೋಗಿ ಸಾಯಿ” ಎಂದು ಹೇಳುವುದು ಸೇರಿದಂತೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆ ಸಂದರ್ಭದಲ್ಲೂ ಯುವತಿ ವೀಡಿಯೋ ಕಾಲ್ನಲ್ಲಿ ಇದ್ದಳು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ಸಂಬಂಧ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮೊಬೈಲ್ ಚಾಟ್ಗಳು ಮತ್ತು ವೀಡಿಯೋ ಕಾಲ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.


