Saturday, January 17, 2026
Flats for sale
Homeಜಿಲ್ಲೆಮಂಗಳೂರು ; ಮೇ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ನೂತನ ಜಿಲ್ಲಾಧಿಕಾರಿ ಕಛೇರಿ ಉಧ್ಘಾಟನೆ,...

ಮಂಗಳೂರು ; ಮೇ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ನೂತನ ಜಿಲ್ಲಾಧಿಕಾರಿ ಕಛೇರಿ ಉಧ್ಘಾಟನೆ, ಜೊತೆಗೆ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳ ವಿತರಣೆ ; ಶಾಸಕ ಮಂಜುನಾಥ ಭಂಡಾರಿ..!

ಮಂಗಳೂರು : “ಮೇ 16ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು ಈ ವೇಳೆ ದೇಶದಲ್ಲೇ ಅತ್ಯಂತ ದೊಡ್ಡದಾದ ಹಾಗೂ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಲೋಕಾರ್ಪಣೆಗೊಳ್ಳಲಿದೆ” ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸಿದ್ದರಾಮಯ್ಯ ಅವರು ಪಾಲ್ಗೊಳ್ಳುವ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಬೇಕು ಎಂಬ ನಿಟ್ಟಿನಲ್ಲಿ ಅಂದು 8000 ಮಂದಿ ಫಲಾನುಭವಿಗಳಿಗೆ ಮನೆಯ ಆರ್ ಟಿಸಿ ವಿತರಣೆ, ಅಲ್ಪಸಂಖ್ಯಾತ ನಿಗಮ, ಅಂಬೇಡ್ಕರ್ ನಿಗಮ ಸಹಿತ ಮೂರು ನಿಗಮಗಳ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ“ ಎಂದರು.

”ಅದೇ ದಿನ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ 8 ವರ್ಷಗಳ ಹಿಂದೆಯೇ ಶಿಲಾನ್ಯಾಸ ನೆರವೇರಿತ್ತಾದರೂ ಅದು ಸಂಪೂರ್ಣಗೊಂಡಿರಲಿಲ್ಲ. ನಾನು, ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭಾ ಅಧ್ಯಕ್ಷರು ಸೇರಿ ಎರಡು ಮೂರು ಬಾರಿ ಜಿಲ್ಲಾಧಿಕಾರಿ ಕಚೇರಿಯನ್ನು ಪೂರ್ತಿಗೊಳಿಸಲು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿಯನ್ನು ಮಾಡಿದ್ದೆವು. ನಂತರ ಅವರನ್ನು ಕರೆದುಕೊಂಡು ಬಂದು ತೋರಿಸಿದಾಗ ಹೆಚ್ಚುವರಿ 30 ಕೋಟಿ ರೂ. ಅಂದಾಜು ಅನುದಾನ ಬೇಕಾಗಬಹುದು ಎಂದು ಮನವಿ ಮಾಡಿದಂತೆ ಅವರು ವಿಶೇಷ ಮುತುವರ್ಜಿ ವಹಿಸಿ 20 ಕೋಟಿ ರೂ. ಅನ್ನು ಬಿಡುಗಡೆ ಮಾಡಿ ಕಟ್ಟಡ ಪೂರ್ಣಗೊಳ್ಳಲು ಸಹಕರಿಸಿದ್ದಾರೆ. ಸುಮಾರು 75 ಕೋಟಿ ರೂ. ವೆಚ್ಚದಲ್ಲಿ 22 ಬೇರೆ ಬೇರೆ ಇಲಾಖೆಗಳ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡುವ ಮೂಲಕ ಜನರಿಗೆ ತಮ್ಮ ಕೆಲಸವನ್ನು ಸುಸುತ್ರವಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ“ ಎಂದರು.

”ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಫಲಾನುಭವಿಗಳ ಜೊತೆ ಚುನಾಯಿತ ಜನಪ್ರತಿನಿಧಿಗಳನ್ನು ಕೂಡಾ ಆಮಂತ್ರಿಸಲಾಗಿದೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸಿದ್ದ ನಾಯಕರು, ಪಕ್ಷದ ಪ್ರಮುಖರು, ನಾಯಕರ ಜೊತೆ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಣಯಿಸಲಾಗಿದೆ“ ಎಂದು ಮಾಹಿತಿ ನೀಡಿದರು.

”ಸಿದ್ದರಾಮಯ್ಯ ಯುದ್ಧ ಬೇಡ ಎಂದರೆ ಬಿಜೆಪಿಗರು ಮೇಲೆ ಹಾರುತ್ತಾರೆ ಅದೇ ಅಮೇರಿಕಾ ಅಧ್ಯಕ್ಷ ಟ್ರಂಪ್ ಯುದ್ಧ ಮಾಡ್ಬೇಡಿ ಎಂದರೆ ಬಿಜೆಪಿ ನಾಯಕರು ತುಟಿ ಬಿಚ್ಚುವುದಿಲ್ಲ. ಭಾರತ ಪಾಕಿಸ್ತಾನ ಯುದ್ಧದ ಕುರಿತು ಚಕ್ರವರ್ತಿ ಸೂಲಿಬೆಲೆ ಸೈನ್ಯ ಮತ್ತು ಯುದ್ಧದ ಸಂಪೂರ್ಣ ಮಾಹಿತಿಯನ್ನು ಹೊಂದಿರುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾರೆ. ಅವರ ಪೋಸ್ಟ್ ಗಳು ಸಮಾಜದ ಜನರ ದಾರಿ ತಪ್ಪಿಸುವಂತಿದ್ದು ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು. ಇದು ನಿಜವಾದ ದೇಶದ್ರೋಹದ ಕೆಲಸವಾಗಿದ್ದು ಈ ಬಗ್ಗೆ ಜನರು ಜಾಗೃತಗೊಳ್ಳಬೇಕು“ ಎಂದು ಇದೇ ಸಂದರ್ಭದಲ್ಲಿ ಮಂಜುನಾಥ ಭಂಡಾರಿ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಿಥುನ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವ, ಎಂ.ಎಸ್. ಮುಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ರಕ್ಷಿತ್ ಶಿವರಾಮ್, ಸಾಹುಲ್ ಹಮೀದ್ ಕೆ, ಸುಹಾನ್ ಆಳ್ವ, ಬಶೀರ್ ಕಣ್ಣೂರ್, ಶುಭೋದಯ ಆಳ್ವಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular