ಮಂಗಳೂರು ; ಉತ್ತರದ ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದ ರೆಹಮತ್ ಹಾಗೂ ಆಕೆಯ ಪತಿ ಶೋಯೆಬ್ ಎಂಬವರನ್ನು ನಿನ್ನೆ ಬಂಧಿಸಲಾಗಿತ್ತು. ಇದೀಗ ಉಳಿದ ಆರೋಪಿಗಳಾದ ಅಬ್ದುಲ್ ಸತ್ತಾರ್ , ಮುಸ್ತಾಫಾ ಮತ್ತು ಶಾಫಿ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿ ಕಾವೂರು ಪೊಲೀಸ್ ಠಾಣೆಗೆ ಹಾಜುರಪಡಿಸಿದ್ದಾರೆ. ಮುಮ್ತಾಜ್ ಆಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಗೊತ್ತಾದ ಬಳಿಕ ಎಲ್ಲಾ ಆರೋಪಿಗಳು ಪರಾರಿಯಾಗಿದ್ದರು. ರೆಹಮತ್ ಹಾಗೂ ಶೋಯೆಬ್ ನಿನ್ನೆ ಬಂಟ್ವಾಳದ ಮೆಲ್ಕಾರಿನಲ್ಲಿ ಬಂಧನವಾಗಿತ್ತು. ಇಂದು ಬಂಧನವಾಗಿರುವ ಆರೋಪಿಗಳು ಮುಂಬೈಗೆ ಪರಾರಿಯಾಗಲು ಸಂಚು ರೂಪಿಸಿದ್ದು , ಬೆಳಗಾವಿಯಲ್ಲಿ ಅಡಗಿಕೊಂಡಿದ್ದರು. ಖಚಿತ ಮಾಹಿತಿ ಮೆರೆಗೆ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಮುಮ್ತಾಜ್ ಆಲಿ ಅವರ ಆತ್ಮಹತ್ಯೆ ಪ್ರಕರಣದ ಎ2 ಆರೋಪಿಯಾಗಿರುವ ಅಬ್ದುಲ್ ಸತ್ತಾರ್ಗೆ ಊರಿನಿಂದ ಬಹಿಷ್ಕಾರ ಹಾಕಬೇಕು ಎಂದು ಆಗ್ರಹ ಕೇಳಿ ಬಂದಿದೆ. ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಜಮಾಅತ್ ಸದಸ್ಯರು ಮಸೀದಿ ಆಡಳಿತ ಮಂಡಳಿ ಮುಂದೆ ಈ ಆಗ್ರಹ ಮಾಡಿದ್ದಾರೆ. ಮಂಗಳವಾರ ರಾತ್ರಿ ಜುಮಾ ಮಸೀದಿ ಮುಂದೆ ಸೇರಿದ ಚಾಲೆಂಜ್ ಫ್ರೆಂಡ್ಸ್ ಸರ್ಕಲ್ ಮತ್ತು ಆರೋಪಿ ಸತ್ತಾರ್ ಅಧ್ಯಕ್ಷನಾಗಿದ್ದ ನ್ಯೂಫ್ರೆಂಡ್ಸ್ ಕ್ಲಬ್ ಸದಸ್ಯರು ಈ ಮನವಿ ಮಾಡಿದ್ದಾರೆ. ಆರೋಪಿಯನ್ನು ಊರಿನಿಂದ ಬಹಿಷ್ಕಾರ ಮಾಡಬೇಕು ಮತ್ತು ಆತ ಮರಣ ಹೊಂದಿದರೆ ಆತನ ದಫನ ಕಾರ್ಯಕ್ಕೂ ಜಮಾಅತ್ ವ್ಯಾಪ್ತಿಯ ದಫನ ಭೂಮಿಯಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಉಳಿದ ಆರೋಪಿಗಳಾದ ಸಿರಾಜ್ ಮತ್ತು ಮುಸ್ತಾಫಾ ಅವರ ಮೇಲಿನ ಆರೋಪ ಸಾಬೀತಾದರೆ ಅವರಿಗೂ ಇದೇ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದ ಮುಮ್ತಾಜ್ ಅಲಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಭಾಗಿಯಾಗಿದ್ದರೂ ಇದೇ ರೀತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಜಮಾತ್ ಕಮಿಟಿ ನ್ಯಾಯಯುತ ತೀರ್ಮಾನ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹಿಲ್ ಸೈಡ್ ಮ್ಯಾರೇಜ್ ಫ್ರೆಂಡ್ಸ್ ಸರ್ಕಲ್ ಹೇಳಿದೆ.