ಮಂಗಳೂರು : ಪಾಂಡೇಶ್ವರ ಅಶ್ವಥ ಕಟ್ಟೆ ಸೇವಾ ಸಮಿತಿ ಹಾಗೂ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಅವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು “ಪಾಂಡೇಶ್ವರ ನೈಟ್ಸ್” ಕಾರ್ಯಕ್ರಮವು ಇಂದು ಭಕ್ತಿಭಾವ ಮತ್ತು ಸಂಭ್ರಮದಿಂದ ಜರುಗಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅಣ್ಣ ಸಂತರ್ಪಣೆ ನಡೆಯಿತು.





ಕಾರ್ಯಕ್ರಮದಲ್ಲಿ ಕನ್ನಡದ “ಸೂ ಪ್ರೊಂ ಸೋ” ಚಿತ್ರದ ನಟ ಸನೀಲ್ ಗೌತಮ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಾಂಡೇಶ್ವರ ಕಟ್ಟೆ ಫ್ರೆಂಡ್ಸ್ ತಂಡದ ಕಾರ್ಯವನ್ನು ಮೆಚ್ಚಿ ಕೃತಜ್ಞತೆ ಸಲ್ಲಿಸಿದರು. ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರತಿವರ್ಷ ಹೊಸ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಖ್ಯಾತ ನಟ ವಸಿಷ್ಠ ಸಿಂಹ ಮಾತನಾಡಿ, “ಮಂಗಳೂರು ನನಗೆ ಎರಡನೇ ಮನೆ. ಕಳೆದ ಒಂದು ತಿಂಗಳಿಂದ ‘ಕಡಲಕೊಟೆ’ ಚಿತ್ರದ ಚಿತ್ರೀಕರಣಕ್ಕಾಗಿ ಇಲ್ಲೇ ತಂಗಿದ್ದೇನೆ. ಈ ಊರಿನ ಸೊಗಡು, ಜನರ ಸ್ನೇಹ, ಸಂಸ್ಕೃತಿ—all are very special,” ಎಂದರು. ಮುಂದಿನ ದಿನಗಳಲ್ಲಿ ತುಳು ಭಾಷೆ ಕಲಿಯುವ ಆಸೆ ಹೊಂದಿದ್ದೇನೆ ಎಂದು ಕೂಡ ಹೇಳಿದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ದಿವಾಕರ್ ಪಾಂಡೇಶ್ವರ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಈ ಭಾಗದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ ಅಮೂಲ್ಯ ಎಂದು ಹೇಳಿದರು. ಕಳೆದ 23 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಮುಂದೆಯೂ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸಿದರು.
ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಮಾತನಾಡಿ, “ಜನರ ಆಶೀರ್ವಾದ ಮತ್ತು ಸಹಕಾರದಿಂದಲೇ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಪಾಂಡೇಶ್ವರ ಮಹಾಲಿಂಗೇಶ್ವರ ದೇವರ ಕೃಪೆಯಿಂದ ಎಲ್ಲವೂ ಸುಗಮವಾಗಿ ನಡೆದಿದ್ದು, ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳು,” ಎಂದರು.
ಕಾರ್ಯಕ್ರಮದ ಅಂಗವಾಗಿ ಇಬ್ಬರು ವಿಕಲಚೇತನರಿಗೆ ಗಾಳಿಕುರ್ಚಿ ವಿತರಣೆ ಮಾಡಲಾಯಿತು. 25 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ಖ್ಯಾತ ಗಾಯಕಿ ಅಖಿಲ ಪಜಿಮಣ್ಣು ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾಜಿ ಮೇಯರ್ ಮನೋಜ್ ಕೋಡಿಕಲ್, ಪ್ರೇಮಾನಂದ ಶೆಟ್ಟಿ, ಜಯನಂದ ಆಂಚಾನ್, ಕಾರ್ಪೊರೇಟರ್ ಶಕೀಲ ಕಾವ, ವೀಣಾ ಮಂಗಳ, ಬಾನುಮತಿ, ಗಣೇಶ್ ಆಂಚಾನ್, ಮನೋಹರ್ ಶೆಟ್ಟಿ ಕದ್ರಿ, ಪೂರ್ಣಿಮಾ, ಪೂರ್ಣಿಮಾ ರಾವ್, ಶಿವನಂದ ಮೆಂಡನ್, ರಾಜೇಶ್ ಪಾಂಡೆಶ್ವರ, ನಿತಿನ್ ಕಾಮತ್,ಚಂದ್ರವತಿ,ವಿಶ್ವನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


