ಮಂಗಳೂರು ; ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್” ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ಮಾನ್ಯ ನ್ಯಾಯಾಲಯದ ಪ್ರಕರಣ ದಲ್ಲಿ ವ್ಯವಹರಿಸಲು ದಾಖಲಾತಿಗಳನ್ನು ಪಡೆದುಕೊಳ್ಳಲು ಮಂಗಳೂರು ಮಹಾ ನಗರ ಪಾಲಿಕೆಗೆ ಭೇಟಿ ನೀಡಿದ್ದು, ಆ ಸಂದರ್ಭ ಅವರ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿರುತ್ತದೆ. ಆದರೆ ಬಾಲಕೃಷ್ಣ ಸುವರ್ಣ ರವರಲ್ಲಿ ಊರ್ಜಿತವಾಗಿರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಇದ್ದು, ಇದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣ ರವರಿಂದ ಪೃಥ್ವಿರಾಜ್ ಶೆಟ್ಟಿ ಮುನ್ನಾ ಎಂಬಾತನು 27,990/- ರೂ ಹಣವನ್ನು ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಠಿಸಿ ನೀಡಿರುವುದು ತಿಳಿದು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಶ್ರೀ ಬಾಲಕೃಷ್ಣ ಸುವರ್ಣರವರು ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆಯನ್ನು ಸೃಷ್ಠಿಸಿ ವಂಚಿಸಿರುವ ಪೃಥ್ವಿರಾಜ್ ಶೆಟ್ಟಿ ವಿರುದ್ದ ದೂರು ನೀಡಿ ಪ್ರಕರಣ ದಾಖಲಾಗಿದೆ.
ಅಲ್ಲದೇ ಪಂಪ್ ವೆಲ್ ನಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ವರ್ಕ್ ಶಾಪ್ ನ ಮಾಲೀಕರಾದ ದೇವಾಂಗ ಕೆ ಪಟೇಲ್ ರವರು ಕೂಡಾ ಪೃಥ್ವಿರಾಜ್ ಶೆಟ್ಟಿ ಮುನ್ನ ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ನಕಲಿ ಆಸ್ತಿ ತೆರಿಗೆಯನ್ನು ಸೃಷ್ಠಿಸಿ ವಂಚಿಸಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿ ಕೇಸು ದಾಖಲಾಗಿರುತ್ತದೆ.
ಈ ಪ್ರಕರಣ ದಾಖಲಾದ ಸಮಯ ಆರೋಪಿ ಪೃಥ್ವಿರಾಜ್ ಶೆಟ್ಟಿ ಮುನ್ನ, ಉಜ್ಜೋಡಿ ನಿವಾಸಿ ಕೇರಳದ ಹಲವು ಕಡೆಗಳಲ್ಲಿ ತಲೆಮರೆಸಿಕೊಂಡು ನಂತರ ಕಿನ್ನಿಗೋಳಿಗೆ ಬರುತ್ತಿರುವ ಮಾಹಿತಿಯಂತೆ 25-07-2025 ರಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈತನನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯ ತಂದೆ ಗಣೇಶ್ ರವರು ದೇವಾಂಗ್ ಕೆ ಪಟೇಲ್ ರವರ ಅಂಗಡಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು, ನಂತರ ತನ್ನ ತಂದೆಗೆ ಅನಾರೋಗ್ಯವಾದ ಕಾರಣ 2004 ರಿಂದ ತಾನು ಕೆಲಸವನ್ನು ಮುಂದುವರಿಸಿ, ದೇವಾಂಗ ಕೆ ಪಟೇಲ್ ಹಾಗೂ ಅವರ ಪರಿಚಯದ ಬಾಲಕೃಷ್ಣ ರವರಿಗೆ ಸಂಬಂಧಿಸಿದ ಉದ್ದಿಮೆಯ 2025-26 ನೇ ಸಾಲಿನ ಪರವಾನಿಗೆಯನ್ನು ನವೀಕರಣ ಮಾಡಲು ಹಾಗೂ ಕಟ್ಟಡಗಳ ಆಸ್ತಿ ತೆರಿಗೆ ಪಾವತಿ ಮಾಡಲು ಹಣ ಪಡೆದುಕೊಂಡು ತನ್ನ ಮೊಬೈಲ್ ನಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ MCC Trade Licence ಹಾಗೂ MCC Property Tax ವೆಬ್ ಸೈಟ್ ಗೆ ಲಾಗ್ ಇನ್ ಆಗಿ, ಉದ್ದಿಮೆ ಮಾಲಿಕರ ಮೊಬೈಲ್ OTP ಪಡೆದು , ಹಿಂದಿನ ವರ್ಷದ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆ ರಶೀದಿಯನ್ನು ಡೌನ್ ಲೋಡ್ ಮಾಡಿ, 3rd Party ಅಪ್ಲಿಕೇಶನ್ ಮುಖಾಂತರ ದಿನಾಂಕಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಎಡಿಟ್ ಮಾಡಿ ಅದನ್ನು ಪ್ರಿಂಟ್ ಮಾಡಿ, ದೇವಾಂಗ್ ಕೆ ಪಟೇಲ್ ಹಾಗೂ ಬಾಲಕೃಷ್ಣ ಸುವರ್ಣ ರವರಿಗೆ ನೀಡಿದ್ದನು ಎಂದು ತಿಳಿದಿದೆ.
ಆರೋಪಿಯು ದೇವಾಂಗ್ ಕೆ ಪಟೇಲ್ ಹಾಗೂ ಬಾಲಕೃಷ್ಣ ಸುವರ್ಣ ರವರಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನೀಡಿ ವಂಚಿಸಿದ್ದು, ನಕಲಿ ದಾಖಲಾತಿಗಳನ್ನು ಸೃಷ್ಠಿಸಲು ಉಪಯೋಗಿಸಿದ ಸಲಕರಣೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಪ್ರಸ್ತುತ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯು ಇನ್ನೂ ಇತರ ಉದ್ದಿಮೆದಾರರಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನೀಡಿರುತ್ತಾನೆಯೇ ಎಂಬ ಬಗ್ಗೆ ಕಂಕನಾಡಿ ಮತ್ತು ಬರ್ಕೆ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ.