ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪಟಾಕಿ ಸಂಗ್ರಹಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳ ಮೂಲದ ಸ್ವಾಮಿ (55), ವರ್ಗೀಸ್ (68) ಮತ್ತು ಹಾಸನ ಜಿಲ್ಲೆಯ ಚೇತನ್ (25) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿ ಸಯ್ಯದ್ ಬಶೀರ್ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿರುವ ಘನ ಪಟಾಕಿ ಗೋದಾಮಿನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಸ್ಫೋಟದ ಸಮಯದಲ್ಲಿ ಇದ್ದ ಒಂಬತ್ತು ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ದಿನೇಶ್, ಕಿರಣ್, ಕುಮಾರ, ಕಲ್ಲೇಶ, ಪ್ರೇಮ್ ಮತ್ತು ಕೇಶವ ಗಾಯಗೊಂಡಿದ್ದಾರೆ. ಸ್ಫೋಟವು ಹತ್ತಿರದ ಮನೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ, ಪರಿಣಾಮವು 4 ಕಿಲೋಮೀಟರ್ ದೂರದವರೆಗೆ ಉಂಟಾಗಿದ್ದು ಸ್ಥಳೀಯರು ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಸ್ಪೋಟಗೊಂಡ ಗೋದಾಮಿನ ಪಕ್ಕದಲ್ಲಿ ಮನೆಯೊಂದು ಇದೆ. ಈ ಮನೆಯಲ್ಲಿ ವೃದ್ಧ ದಂಪತಿ ವಾಸವಾಗಿದ್ದಾರೆ. ರವಿವಾರ (ಜ.28) ಸ್ಪೋಟಗೊಂಡ ಸಮಯದಲ್ಲಿ ವೃದ್ಧ ದಂಪತಿ ಮನೆಯ ಹೊರಗಡೆ ಕೂತು ಚಹಾ ಕುಡಿಯುತ್ತಿದ್ದರು. ಈ ವೇಳೆ ಗೋದಾಮಿನಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ತೀರ್ವತೆಗೆ ವೃದ್ಧ ದಂಪತಿಯ ಮನೆ ಕೂಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ದಂಪತಿ ಹೊರಗಡೆ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸ್ಫೋಟದ ತೀರ್ವತೆಗೆ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಛಾವಣಿಯ ಶೀಟ್ಗಳು ತುಂಡು ತುಂಡಾಗಿ ಮುರಿದು ಕೆಳಗೆ ಬಿದ್ದಿವೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು . ಸ್ಫೋಟಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸರು ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು ಬಳಿಕ ನೈಜ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.