Saturday, March 29, 2025
Flats for sale
Homeರಾಜ್ಯಮಂಗಳೂರು : “ಬೆಳವಣಿಗೆಗೆ ತಕ್ಕಂತೆ ಬದಲಾವಣೆಗೊಂಡು ಗ್ರಾಹಕ ಸ್ನೇಹಿಯಾಗಿರುವ ಎಸ್ ಸಿಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿ...

ಮಂಗಳೂರು : “ಬೆಳವಣಿಗೆಗೆ ತಕ್ಕಂತೆ ಬದಲಾವಣೆಗೊಂಡು ಗ್ರಾಹಕ ಸ್ನೇಹಿಯಾಗಿರುವ ಎಸ್ ಸಿಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿ : ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್..!

ಮಂಗಳೂರು : ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇವರ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ಸಮವಸ್ತ್ರ ವಿತರಣಾ ಸಮಾರಂಭ ಸೋಮವಾರ ಬೆಳಗ್ಗೆ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು, “ಇಂದಿನ ಬೆಳವಣಿಗೆಗೆ ತಕ್ಕಂತೆ ಬದಲಾವಣೆಗೊಂಡು ಗ್ರಾಹಕ ಸ್ನೇಹಿಯಾಗಿರುವ ಎಸ್ ಸಿಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿ. ಮೊದಲು ಮನೆಗಳು ಬದಲಾವಣೆಯಾಗಬೇಕು ನಂತರ ಮನಗಳು ಬದಲಾವಣೆಯಾಗುತ್ತದೆ. ಮನೆಗಳಲ್ಲಿ ಬದಲಾವಣೆಯಾಗಬೇಕಾದರೆ ಮನೆಯ ಹೆಣ್ಣುಮಕ್ಕಳು ಸಶಕ್ತರಾಗಬೇಕು. ಮಹಿಳೆಯರನ್ನು ಸ್ವಾವಲಂಬನೆಗೊಳಿಸಿರುವ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮುಂದೆಯೂ ದೇಶದಲ್ಲಿ ಹೆಸರು ಮಾಡಲಿ“ ಎಂದರು.

ಅಧ್ಯಕ್ಷತೆ ವಹಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್.ರಾಜೇಂದ್ರ ಕುಮಾರ್ ಅವರು, “2000ನೇ ಇಸವಿಯಲ್ಲಿ ನವೋದಯ ಸ್ವಸಹಾಯ ಸಂಘ ಸ್ಥಾಪಿಸುವಾಗ 9500 ಮಂದಿ ಮಹಿಳೆಯರು ಪಾಲ್ಗೊಳ್ಳುವ ಮೂಲಕ ನಮಗೆ ಶಕ್ತಿ ತುಂಬಿದರು. ಇಂದು ಸುಮಾರು 5 ಲಕ್ಷ ಮಂದಿ ಮಹಿಳೆಯರು ಇದರಲ್ಲಿ ಜೋಡಣೆಯಾಗಿದ್ದು ಎಂಟು ಜಿಲ್ಲೆಗಳಲ್ಲಿ ವಿಸ್ತರಣೆಗೊಂಡಿದೆ. ಮೇ ತಿಂಗಳಲ್ಲಿ ಸಂಘಕ್ಕೆ 25 ವರ್ಷ ತುಂಬುವಾಗ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಸದಸ್ಯೆಯರು ಒಂದೇ ಸಮವಸ್ತ್ರದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗಬೇಕು. ನಿಮಗೆ ಸೀರೆ ಖರೀದಿ ಮಾಡಲು ಹಣ ಇಲ್ಲ ಅಂತ ಸೀರೆ ಕೊಡುತ್ತಿಲ್ಲ. ಆದರೆ ಎಲ್ಲರಿಗೂ ಸಮವಸ್ತ್ರ ಕೊಡಬೇಕು ಎಲ್ಲರೂ ಸಮಾನರು ಎಂಬ ಉದ್ದೇಶದಿಂದ ಕೊಡುತ್ತಿದ್ದೇನೆ“ ಎಂದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತಾಡಿ, ”ಕೊರೋನ ಸಂದರ್ಭದಲ್ಲಿ ಎಂ.ಎನ್. ರಾಜೇಂದ್ರ ಕುಮಾರ್ ಅವರು ಕ್ವಾರಂಟೈನ್ ಮಾಡಲು ತಮ್ಮ ಕಟ್ಟಡಗಳನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಡುವ ಮೂಲಕ ಜನಪರ ಕಾಳಜಿಯನ್ನು ತೋರಿಸಿದವರು. ಹೆಣ್ಣುಮಕ್ಕಳು ಆರ್ಥಿಕವಾಗಿ ಸಶಕ್ತರಾಗಬೇಕು ಆ ಮೂಲಕ ಸಮಾಜ ಸದೃಢಗೊಳ್ಳಬೇಕು ಎಂಬ ದೃಷ್ಟಿಯಿಂದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದವರು. ತಮ್ಮ ಸ್ವಸಹಾಯ ಸದಸ್ಯೆಯರ ಮಕ್ಕಳ ಶಿಕ್ಷಣಕ್ಕೆ ಸ್ಕಾಲರ್ ಶಿಪ್ ನೀಡುವ ಮೂಲಕ ನೆರವು ನೀಡಿದವರು. ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಅವರಿಗೆ ಭಗವಂತ ಆಯುಷ್ಯ ಆರೋಗ್ಯ ಕೊಡಲಿ“ ಎಂದು ಹೇಳಿದರು.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತಾಡಿ, “ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಂಡರೆ ಇಡೀ ದೇಶ ಅಭಿವೃದ್ಧಿಯಾದಂತೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬ್ಯಾಂಕ್ ಚುಕ್ಕಾಣಿ ಹಿಡಿದ ಬಳಿಕ ಇಡೀ ದೇಶಕ್ಕೆ ಮಾದರಿಯಾಗಿ ಬ್ಯಾಂಕ್ ಕೆಲಸ ಮಾಡುತ್ತಿದೆ. ಬ್ಯಾಂಕ್ ಬೆಳವಣಿಗೆ ಮತ್ತು ಸಹಕಾರಿ ಚಿಂತನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ರಾಜ್ಯ ಸರಕಾರ ಕೂಡ ಮಹಿಳೆಯರಿಗೆ ಪೂರಕವಾಗಿ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಜಾರಿಗೆ ತಂದಿದೆ“ ಎಂದರು.

ಇದೇ ಸಂದರ್ಭದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ಸಾಂಕೇತಿಕವಾಗಿ ಸಮವಸ್ತ್ರ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ, ಬ್ಯಾಂಕ್ ನಿರ್ದೇಶಕರಾದ ವಿನಯ್ ಕುಮಾರ್ ಸೂರಿಂಜೆ, ಶಶಿಕುಮಾರ್ ರೈ ಬೊಳ್ಯೊಟ್ಟು, ಸಿಇಓ ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ನಿತೀಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular