ಮಂಗಳೂರು : ಇಡೀ ದಿನ ಹುಡುಕಾಡಿದ್ರೂ ಕಣ್ಣಿಗೆ ಬೀಳದ ಮೀನುಗಳು ಬರಿಗೈಲಿ ವಾಪಾಸಾಗಿ ಲಂಗರು ಹಾಕಿದ ನೂರಾರು ಬೋಟ್‌ಗಳು ಮತ್ಸ್ಯ ಸಂಕುಲಕ್ಕೂ ಕಾಡಿದ ಬಿಸಿಲ ತಾಪಕ್ಕೆ ಮೀನುಗಾರರು ಕಂಗಾಲಾಗಿದ್ದರೆ. ಚಳಿಗಾಲ ಮುಗಿದ ತಕ್ಷಣವೇ ಏರಿದ ತಾಪಮಾನದಿಂದಾಗಿ ಜನರು ತತ್ತರಿಸಿ ಹೋಗಿದ್ದರೆ, ಪ್ರಾಣಿ ಪಕ್ಷಿಗಳು ಕೂಡಾ ಸಂಕಷ್ಟಕ್ಕೆ ಸಿಲುಕಿದೆ. ಹಾಗಂತ ಈ ಉಷ್ಣಾಂಷದ ಏರಿಕೆಯ ಬಿಸಿ ಕೇವಲ ಪ್ರಾಣಿ ಪಕ್ಷಿಗೆ ಮಾತ್ರವಲ್ಲದೆ ಜಲಚರಗಳಿಗೂ ತಟ್ಟಿದೆ.

ಸಮುದ್ರದ ಮೇಲ್ಮೈನಲ್ಲಿನ ನೀರು ಬಿಸಿಯಾಗುತ್ತಿದ್ದು, ಜಲಚರಗಳು ತಂಪಾಗಿರುವ ಜಾಗವನ್ನು ಹುಡುಕಿಕೊಂಡು ಪಾತಾಳ ಸೇರಿಕೊಂಡಿದೆ. ಹೀಗಾಗಿ ಸಮುದ್ರದಲ್ಲಿ ಮತ್ಸ್ಯ ಭೇಟೆಗೆ ಹೋದ ಮೀನುಗಾರರು ಬರಿಗೈನಲ್ಲೇ ವಾಪಾಸಾಗುತ್ತಿದ್ದಾರೆ. ಸಾಮಾನ್ಯವಾಗಿ ಮೀನುಗಳು ಸಮುದ್ರದ ಮೇಲಿನ ಭಾಗದಲ್ಲಿ ಇದ್ದು, ದೂರದಿಂದಲೇ ಮೀನುಗಾರರು ಇದನ್ನು ಗಮನಿಸಿ ಬಲೆ ಹಾಕಿ ಮೀನು ಹಿಡಿಯುತ್ತಾರೆ. ಆದ್ರೆ ಬಿಸಿಲಿನಿಂದ ಸಮುದ್ರದ ನೀರು ಕೂಡಾ ಬಿಸಿಯಾಗಿರುವ ಕಾರಣ ಮೀನುಗಳು ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಹೀಗಾಗಿ ಮೀನುಗಳು ಸಿಗದೆ ಮೀನುಗಾರರಿಗೆ ಅಪಾರ ನಷ್ಟ ಉಂಟಾಗಿದೆ. ಒಂದು ಬಾರಿ ಸಮುದ್ರಕ್ಕೆ ಹೋಗಿ ಬಂದರೆ ಕಡಿಮೆ ಅಂದ್ರೂ ಎರಡರಿಂದ ಮೂರು ಲಕ್ಷಗಳು ಖರ್ಚಾಗುತ್ತಿದ್ದು ಆಳ ಸಮುದ್ರದ ಮೀನುಗಾರಿಕೆಗೆ ತೆರಳುವವರಿಗೆ ಇನ್ನೂ ಅಧಿಕ ಖರ್ಚು ಬರುತ್ತಿದೆ. ಆದ್ರೆ ಮೀನು ಸಿಗದೆ ಬರಿಗೈನಲ್ಲಿ ವಾಪಾಸಾಗಿ ಭಾರಿ ನಷ್ಟ ಅನುಭವಿಸುವಂತಾಗಿದೆ. ಇದೇ ಕಾರಣದಿಂದ ಮಂಗಳೂರು ದಕ್ಕೆಯಲ್ಲಿ ನೂರಾರು ಮೀನುಗಾರಿಕಾ ಬೋಟ್ ಗಳು ಲಂಗರು ಹಾಕಿದ್ದು ಮೀನುಗಾರಿಕೆಗೆ ಅಘೋಷಿತ ರಜೆ ಮಾಡಲಾಗಿದೆ.
ಇನ್ನು ಕೆಲ ಬೋಟ್ ಗಳಿಗೆ ಮೀನುಗಳು ಸಿಗುತ್ತಿದೆಯಾದ್ರೂ ಅದು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಹೀಗಾಗಿ ಮೀನು ಪ್ರೀಯರಿಗೂ ತಮ್ಮಿಷ್ಟ ಮೀನು ಖರೀದಿ ಮಾಡಿ ಸವಿಯುವುದು ಕೊಂಚ ಬಿಸಿಯಾಗಿದೆ. ಒಟ್ಟಾರೆ ಬಿಸಿಲಿನ ತಾಪಕ್ಕೆ ಪಾತಾಳ ಸೇರಿಕೊಂಡ ಮೀನುಗಳಿಂದಾಗಿ ಮಂಗಳೂರಿನ ಮೀನು ಪ್ರೀಯರು ಮೀನಿಲ್ಲದೆ ವಿಲವಿಲ ಒದ್ದಾಡುವಂತಾಗಿದೆ.