ಮಂಗಳೂರು ; ಬಾವಿಯೊಂದಕ್ಕೆ ಬಿದ್ದ ಒಂದು ವರ್ಷ ಪ್ರಾಯದ ಚಿರತೆ ಮರಿಯನ್ನು ಬೋನಿನಲ್ಲಿ ಕುಳಿತು ಬಾವಿಗಿಳಿದು ರಕ್ಷಿಸಿದ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ಪಶುವೈದ್ಯೆಯ ಸಾಹಸಕ್ಕೆ ಅರಣ್ಯ ಇಲಾಖೆ ಸಹಿತ ಎಲ್ಲೆಡೆ ಶ್ಲಾಘನೆ ವ್ಯಕ್ತವಾದ ಘಟನೆ ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿ ಎಂಬಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಈ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆಯವರು ಬಹಳಷ್ಟು ಪ್ರಯತ್ನ ಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ.
ಮೂವತ್ತಡಿಗಿಂತಲೂ ಆಳವಾದ ಬಾವಿಯ ಒಳಗೆ ಗುಹೆಯಂತಿರುವಲ್ಲಿ ಈ ಚಿರತೆ ಮರಿ ಅಡಗಿಕೊಳ್ಳುತ್ತಿತ್ತು. ಇಳಿಸಿದ ಬೋನಿನೊಳಗೂ ಬರಲು ಹಿಂದೇಟು ಹಾಕುತ್ತಿತ್ತು. ಆಗ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಹಚರ್ಯ ಹೊಂದಿರುವ ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ತಜ್ಞ ವೈದ್ಯರು ಸ್ಥಳಕ್ಕಾಗಮಿಸಿದರು. ಸಂರಕ್ಷಣ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತರು. ಅರಣ್ಯ ಇಲಾಖೆಯ ಸಿಬಂದಿಗಳು, ಊರವರು ಸೇರಿಕೊಂಡು ಅವರನ್ನು ಬಾವಿಗಿಳಿಸಲಾಯಿತು. ಹೀಗೆ ಹೆಣ್ಣು ಜೀವವೊಂದು ಹೆಣ್ಣು ಚಿರತೆ ಮರಿಯನ್ನು ಸೆರೆಹಿಡಿಯಲು ಬಾವಿಗಿಳಿದದ್ದು ರೋಮಾಂಚಕ. ಹೀಗೆ ಇಳಿದ ಡಾ. ಮೇಘನಾ ಗುಹೆಯೊಳಗೆ ಕುಳಿತ ಚಿರತೆ ಮರಿಯತ್ತ ಗುರಿಇಟ್ಟು ಅರಿವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯೊಂದಿಗೆ ಹೆಣ್ಣು ಜೀವ ಡಾ. ಮೇಘನಾ ಬಾವಿಯಿಂದ ಮೇಲಕ್ಕೆ ಬಂದರು. ಬಳಿಕ ಚಿರತೆಯನ್ನು ಸೂಕ್ತವಾಗಿ ಬಂಧಿಸಿ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಅದು ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಂಧಮುಕ್ತಗೊಳಿಸಿದ್ದಾರೆ.
ಡಾ. ಯಶಸ್ವಿ ಅವರ ಹಿರಿತನದಲ್ಲಿ ಕಾರ್ಯಾಚರಿಸಿದ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ತಂಡದಲ್ಲಿ ಡಾ. ಮೇಘನಾ ಜತೆಗೆ ಡಾ. ಪೃಥ್ವೀ, ಡಾ. ನಫೀಸಾ ಇವರಿದ್ದರು. ಅರಣ್ಯ ಸಂರಕ್ಷಣಾಕಾರಿ ಸತೀಶ್ ಎನ್., ವಲಯ ಅರಣ್ಯಾಕಾರಿ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಹಾಗೂ ಸಿಬಂದಿಗಳು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲ ಕ್ರಮ ಕೈಗೊಂಡಿದ್ದರು.