ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಗಾಯಗೊಂಡಿದ್ದ ಪ್ರವೀಣ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳಾದ ಮನ್ಸೂರ್ ಪಾಷಾ ಹಾಗೂ ರಿಯಾಜ್ ಹೆಚ್.ವೈ. ಎಂಬವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಚಾರ್ಜ್ಶೀಟ್ ಸಲ್ಲಿಸಿತು.
ಎನ್ಐಎ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಸಂಚುಕೋರ ಹಾಗೂ ರಾಜ್ಯದಲ್ಲಿ ಪಿಎಫ್‌ಐ ಸಂಘಟನೆಯ ಮಾಸ್ಟರ್ ಟ್ರೈನರ್ ಆಗಿದ್ದ ಆರೋಪಿ ಮುಸ್ತಫಾ ಪೈಚಾರ್ ಹಾಗೂ ಆತನಿಗೆ ನೆರವು ನೀಡಿದ್ದ ಮನ್ಸೂರ್ ಪಾಷಾನನ್ನು ಮೇ 10ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಿದ್ದರು. ವಿದೇಶಕ್ಕೆ ಪರಾರಿಯಾಗುಲು ಯತ್ನಿಸಿದ್ದ ರಿಯಾಜ್ ನನ್ನು ಜೂ.3ರಂದು ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಲಾಗಿತ್ತು.
ಪ್ರವೀಣ್ ನೆಟ್ಟಾರು ಕೊಲೆ ಕೇಸ್ನಲ್ಲಿ ಇದುವರೆಗೆ ಎನ್ಐಎ 21 ಆರೋಪಿಗಳನ್ನು ಅರೆಸ್ಟ್ ಮಾಡಿ ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಮಾಡಿತ್ತು. ಇಬ್ಬರೂ ಆರೋಪಿಗಳ ಪಾತ್ರದ ಕುರಿತು ಐಪಿಸಿಯ ಸೆಕ್ಷನ್ 120 ಬಿ ಮತ್ತು 212 ಮತ್ತು ಯುಎ (ಪಿ) ಆ್ಯಕ್ಟ್‌ನ ಸೆಕ್ಷನ್ 19ರ ಆಧಾರದಲ್ಲಿ ತಕ್ಷಣ ಪ್ರಕರಣ ದಾಖಲಿಸಿದ ಎನ್ಐಎ ಸದ್ಯ ಇಬ್ಬರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಉಳಿದ ಏಳು ಜನ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.