ಮಂಗಳೂರು : ದೇಶದ ಭವಿಷ್ಯಕ್ಕಾಗಿ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಲು ಈ ಬಾರೀಯೂ ಪ್ರಧಾನಿ ಮೋದಿಯನ್ನು ಗೆಲ್ಲಿಸಿ ಪ್ರಧಾನಿ ಮಾಡುವುದೇ ನೀವು ವಧು-ವರ ರಿಗೆ ಕೊಡುವ ಉಡುಗೊರೆ ಎಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಮತ ಹಾಕುವಂತೆ ಸಂದೇಶ ಮುದ್ರಿಸಿದ್ದ ವರನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ಎಂಬುವರ ಮದುವೆ ಏ.18 ನಡೆದಿದೆ. ಮದುವೆ ಆಮಂತ್ರಣ ಪತ್ರಿಕೆಗಳು ಮಾರ್ಚ್ 1 ರಂದು ಮುದ್ರಿತವಾಗಿದ್ದವು. ಆಮಂತ್ರಣ ಪತ್ರಿಕೆಯಲ್ಲಿ “ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮಗೆ ನೀವು ನೀಡುವ ಉಡುಗೊರೆ” ಅಂತ ಮುದ್ರಿಸಿ ಹಂಚಿದ್ದರು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರನ ವಿರುದ್ಧ ಏ.17ರಂದು ಚುನಾವಣಾ ನೋಡಲ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಬಳಿಕ ಚುನಾವಣಾ ಅಧಿಕಾರಿಗಳು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ವರನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಸರಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ಸಿದ್ದರಾಮಯ್ಯ ಸರ್ಕಾರ ಇದರ ಮೇಲೂ ಕಳ್ಳಗಣ್ಣು ಬಿಟ್ಟು ವರನ ಮೇಲೆ ದೂರು ದಾಖಲಿಸಿದೆ. ರಾಜ್ಯದಲ್ಲಿ ಪ್ರಧಾನಿ ಮೋದಿಯವರಿಗೆ ಸಿಗುತ್ತಿರುವ ವ್ಯಾಪಕ ಬೆಂಬಲ ನೋಡಿ ಕಾಂಗ್ರೆಸ್ಸಿಗರ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ ಹೇಡಿ ಸರ್ಕಾರ!” ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.ಇದೀಗ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಆಮಂತ್ರಣ ಪತ್ರದಲ್ಲಿ ಮುದ್ರಿಸಿದ ವರನಿಗೆ ಮದುವೆ ಆದ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.