ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮಹತ್ವದ ಸಂರಕ್ಷಣಾ ಸಾಧನೆ ದಾಖಲಾಗಿದೆ. 2026ರ ಜನವರಿ ತಿಂಗಳಲ್ಲಿ ಭಾರತೀಯ ತೋಳ ‘ಗೀತಾ’ ಒಟ್ಟು ಏಳು ಮರಿಗಳಿಗೆ ಜನ್ಮ ನೀಡಿದ್ದು, ಇದರಲ್ಲಿ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮರಿಗಳು ಸೇರಿವೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಳೆದ ಮೂರು ವರ್ಷಗಳಿಂದ ಭಾರತೀಯ ತೋಳಗಳನ್ನು ಸಾಕಲಾಗುತ್ತಿದ್ದು, ಇದೀಗ ಮೊದಲ ಬಾರಿಗೆ ಯಶಸ್ವಿ ಸಂತಾನೋತ್ಪತ್ತಿ ಸಂಭವಿಸಿರುವುದು ವಿಶೇಷ. ಇದು ಉದ್ಯಾನವನದ ಸಂರಕ್ಷಣೆ ಹಾಗೂ ಸೆರೆಹಿಡಿದ ಸಂತಾನೋತ್ಪತ್ತಿ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ತಾಯಿ ತೋಳ ‘ಗೀತಾ’ ಹಾಗೂ ಎಲ್ಲಾ ಏಳು ಮರಿಗಳು ಆರೋಗ್ಯವಾಗಿದ್ದು, ಪಶುವೈದ್ಯರು ಮತ್ತು ಪ್ರಾಣಿ ಪಾಲಕರು ಅವುಗಳನ್ನು ನಿತ್ಯ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮರಿಗಳು ಈಗ ಚುರುಕಾಗಿ ಓಡಾಡುವ ಸ್ಥಿತಿಗೆ ಬಂದಿದ್ದು, ಅವುಗಳನ್ನು ಸಂದರ್ಶಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಈ ಯಶಸ್ಸು ಪಿಲಿಕುಳ ಜೈವಿಕ ಉದ್ಯಾನವನದ ಸಂರಕ್ಷಣಾ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


