ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ನೂತನ ಜಿಲ್ಲಾಧಿಕಾರಿ ಸಂಕೀರ್ಣ ‘ಪ್ರಜಾಸೌಧ’ ನಾಳೆ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆಗೊಳ್ಳಲಿದೆ. ದ.ಕ. ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ, ಸ್ಮಾರ್ಟ್ ಸಿಟಿ ಲಿಮಿಟೆಡ್ ಆಶ್ರಯದಲ್ಲಿ ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ಮೂರು ಮಹಡಿ ಕಚೇರಿ ಒಟ್ಟು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸದ್ಯ ಸುಮಾರು 23 ಇಲಾಖೆಗಳ ಕಾರ್ಯಾಚರಣೆ ಆರಂಭವಾಗಲಿದೆ. ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ಈ ಸಂಕೀರ್ಣ ನಿರ್ಮಾಣಗೊಂಡಿದೆ.
ಈ ಸಂಕೀರ್ಣಕ್ಕೆ 2016ರ ಎಪ್ರಿಲ್ 21ರಲ್ಲಿ ಶಿಲಾನ್ಯಾಸ ನಡೆದಿದ್ದು 9ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣಗೊಂಡಿದೆ. ಬೃಹತ್ತಾದ ಆಡಿಟೋರಿಯಂ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಮೂರು ಮಹಡಿಗಳಲ್ಲೂ ಲಿಫ್ಟ್, ಶೌಚಾಲಯ ಮತ್ತು ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆಯಿದೆ. ಪ್ರವೇಶದ್ವಾರದಲ್ಲಿ ಯಕ್ಷಗಾನದ ಸ್ವಾಗತ ಶಿಲ್ಪವನ್ನು ಅಳವಡಿಸಲಾಗಿದೆ. ಸದ್ಯ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೊಠಡಿಗಳಿಂದ ವಿವಿಧ ಇಲಾಖೆಗಳು ಕಡತಗಳು ನೂತನ ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.