ಮಂಗಳೂರು : “ಶಾಸಕ ವೇದವ್ಯಾಸ ಕಾಮತ್ ಏನು ಇಲ್ಲಿನ ಪಾಳೇಗಾರನ” ಎಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಕೇಳಿದ್ದಕ್ಕೆ ನಾನು ಉತ್ತರ ಕೊಡುವುದಿಲ್ಲ. ಬದಲಿಗೆ “ಪಾಳೆಗಾರ ಅಲ್ಲ ಕಾವಲುಗಾರ” ಎಂದು ಕ್ಷೇತ್ರದ ಜನತೆಯೇ ಉತ್ತರ ಕೊಟ್ಟಿದ್ದಾರೆ. ಅದನ್ನು ಅವರು ಮೊದಲು ಅರಗಿಸಿಕೊಳ್ಳಲಿ ಸಾಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.
“ನಾನು ಕಾವಲುಗಾರ ಎಂದು ಕ್ಷೇತ್ರದ ಜನತೆಯೇ ಉತ್ತರ ಕೊಟ್ಟಿದ್ದಾರೆ. ಅದನ್ನು ಅವರು ಮೊದಲು ಅರಗಿಸಿಕೊಳ್ಳಲಿ ಸಾಕು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಂಗಳಾದೇವಿಯಲ್ಲಿ ಉದ್ಘಾಟನೆಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಬಡ ರೋಗಿಗಳನ್ನು ಹೊರದಬ್ಬಿ ಕೇವಲ ನಾಲ್ಕೆ ದಿನಕ್ಕೆ ಬೀಗ ಹಾಕಿ ಸ್ವಪ್ರತಿಷ್ಠೆ ಹಾಗೂ ರಾಜಕೀಯಕ್ಕಾಗಿ ಮರು ಉದ್ಘಾಟನೆ ಎಂಬ ಹೊಸ ಮತ್ತು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕಾಂಗ್ರೆಸ್ಸಿಗೆ ಕಿಂಚಿತ್ತಾದರೂ ಶೋಭೆ ಇದೆಯೇ? ಸರ್ಕಾರದ ಯಾವುದೇ ಯೋಜನೆಗಳ ಉದ್ಘಾಟನೆಯ ರೂಪುರೇಷೆ ಸಿದ್ಧಪಡಿಸುವ ಕಾರ್ಯ ಶಾಸಕರದ್ದಲ್ಲ. ಅದು ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ನಡೆಯುವಂತದ್ದು. ಹಾಗಾಗಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿಲ್ಲದಿದ್ದರೆ ಅದಕ್ಕೆ ನಾವು ಹೊಣೆಯಲ್ಲ. ಸಚಿವರ ಮಾತಿನಂತೆ ಹೋದರೆ ಇನ್ನು ಮೇಲೆ ಜಿಲ್ಲೆಯಲ್ಲಿ ಶಾಸಕರುಗಳು, ಯಾವುದೇ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಪಟ್ಟಿ ಸಿದ್ದಪಡಿಸುವ, ಅವರನ್ನು ಆಹ್ವಾನಿಸುವ ಆಮಂತ್ರಣ ಪತ್ರಿಕೆ ಅಧಿಕೃತವೋ, ಅನಧಿಕೃತವೋ ಎಂದು ಪರಿಶೀಲಿಸುವ ಹೆಚ್ಚುವರಿ ಜವಾಬ್ದಾರಿ ಹೊರ ಬೇಕಾಗುತ್ತದೆ“ ಎಂದು ಆಕ್ರೋಶ ವ್ಯಕ್ತಪಡಿಸಿದರು.
”ಪರಿಶಿಷ್ಟ ಸಮುದಾಯದ ಗೌರವಾನ್ವಿತ ಮೇಯರ್ ರವರು ಜಿಲ್ಲಾಡಳಿತ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ, ಮಾಹಿತಿ ನೀಡಿ ಉದ್ಘಾಟನೆಯನ್ನು ನಡೆಸಿದ್ದು ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮರು ಉದ್ಘಾಟನೆ ಮಾಡಿ ತಮ್ಮ ನಿಜ ಮಾನಸಿಕತೆಯನ್ನು ತೋರಿಸಿದ್ದಾರೆ. ಇದು ಇಡೀ ಪರಿಶಿಷ್ಟ ಸಮುದಾಯಕ್ಕಾದ ಅವಮಾನವಾಗಿದೆ. ಕ್ಷೇತ್ರದ ಶಾಸಕನಾಗಿ ನಾನು ಹಾಗೂ ಈ ಹಿಂದೆ ಮೇಯರ್ ಆಗಿದ್ದ ಸ್ಥಳೀಯ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿಯವರು ಈ ಯೋಜನೆಯು ಶುರುವಾದಾಗಿನಿಂದ ಹಿಡಿದು ಮುಗಿಯುವವರೆಗೆ ಪ್ರತಿ ಹಂತದಲ್ಲಿಯೂ ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ್ದೇವೆ. ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ರವರ ಸಹಕಾರವೂ ಇದರ ಹಿಂದಿದೆ. ಈಗ ಉದ್ಘಾಟನೆಗೆ ಹಾತೊರೆಯುತ್ತಿರುವ ಯಾರೂ ಕೂಡಾ ಅಂದು ಇರಲಿಲ್ಲ. ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಅಧಿಕೃತ ಆಮಂತ್ರಣ ಪತ್ರಿಕೆಯಲ್ಲಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯುಟಿ ಖಾದರ್, ಎಂಎಲ್‌ಸಿ ಮಂಜುನಾಥ ಭಂಡಾರಿ, ಐವನ್ ಡಿಸೋಜ ರವರ ಹೆಸರೂ ಸಹ ಇದೆ. ಆದರೂ ಸಹ ಗುಂಡೂರಾವ್ ಬಂದಿಲ್ಲ. ಬಹುಷಃ ಇಂತಹ ಜನೋಪಯೋಗಿ ಯೋಜನೆಯಲ್ಲಿ ನಮ್ಮದು ಕಿಂಚಿತ್ತೂ ಕೊಡುಗೆ ಇಲ್ಲ, ಮತ್ತೆ ಯಾವ ಮುಖ ಇಟ್ಟುಕೊಂಡು ಭಾಗವಹಿಸುವುದು ಎಂಬ ಮುಜುಗರ ಅವರನ್ನು ಕಾಡುತ್ತಿರಬಹುದು. ಎರಡು ಮೂರು ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವರಿಗೆ ಇಲ್ಲಿನ ಯೋಜನೆಗಳ ಸ್ಥಿತಿಗತಿ ಗೊತ್ತಾಗುವುದು ಹೇಗೆ?“ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ರಾಜ್ಯದ ಅಲ್ಲಲ್ಲಿ ಉದ್ಘಾಟನಾ ಕಾರ್ಯಕ್ರಮಗಳನ್ನು ಮಾಡಬೇಕಿರುತ್ತದೆ. ಯಾವುದೋ ಕಾರಣಕ್ಕೆ ಕೊನೆಕ್ಷಣದಲ್ಲಿ ಅವರಿಗೆ ಬರಲು ಸಾಧ್ಯವಾಗದಿದ್ದಾಗ ಅಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವುದು ವಾಡಿಕೆ ಹೊರತು ಮುಖ್ಯಮಂತ್ರಿಗಳು ಬಂದಿಲ್ಲ ಎಂದು ಮರು ಉದ್ಘಾಟನೆ ಮಾಡಿದ ಉದಾಹರಣೆಗಳಿಲ್ಲ. ಸ್ವಾತಂತ್ರ್ಯ ದಿನೋತ್ಸವದಂದು ಮುಖ್ಯಮಂತ್ರಿಗಳಿಗೆ ಬರಲು ಸಾಧ್ಯವಾಗಲಿಲ್ಲವೆಂದು ಮತ್ತೊಮ್ಮೆ ಸ್ವಾತಂತ್ರ ದಿನ ಆಚರಿಸಿ ಧ್ವಜಾರೋಹಣ | ನಡೆಸುವುದಿಲ್ಲ. ಕಾಂಗ್ರೆಸ್ ನಾಯಕರ ಯೋಗ್ಯತೆಗೆ ಇಂತಹ ಕನಿಷ್ಠ ಜ್ಞಾನವೂ ಇಲ್ಲವಾಯಿತಾ?“
ಪರಿಶಿಷ್ಟ ಸಮುದಾಯದ ಗೌರವಾನ್ವಿತ ಮೇಯರ್ ರವರು ಜಿಲ್ಲಾಡಳಿತ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ, ಮಾಹಿತಿ ನೀಡಿಯೇ ಮಂಗಳಾದೇವಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆಯನ್ನು ನಡೆಸಿದ್ದು ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮರು ಉದ್ಘಾಟನೆ ಮಾಡಿ ತಮ್ಮ ನಿಜ ಮಾನಸಿಕತೆಯನ್ನು ತೋರಿಸಿದ್ದಾರೆ. ಇದು ಇಡೀ ಪರಿಶಿಷ್ಟ ಸಮುದಾಯಕ್ಕಾದ ಅವಮಾನವಾಗಿದೆ ಎಂದರು.
ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಭಾನುಮತಿ, ಮನಪಾ ಸದಸ್ಯೆ ಪೂರ್ಣಿಮಾ, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.