ಮಂಗಳೂರು : ಮಂಗಳೂರಿನ ಅಮೃತ ವಿದ್ಯಾಲಯಂ ನಲ್ಲಿ ದಿನಾಂಕ 27/7/2025 ರಂದು ಗುರುಪೂರ್ಣಿಮೆ ಪ್ರಯುಕ್ತ ಸಂಸ್ಕೃತಿ ಪೂಜೆಯನ್ನು ನಡೆಸಲಾಯಿತು.



ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ತಮ್ಮ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳನ್ನು ಶಿಕ್ಷಣದ ಜೊತೆಗೆ ಅಳವಡಿಸುವ ಕಾರ್ಯಕ್ರಮದಂತೆ ಸಂಸ್ಕೃತಿ ಪೂಜೆ ಆಯೋಜಿಸಲಾಗುತ್ತದೆ. ಇದರಿಂದಾಗಿ ಮಕ್ಕಳು ತಮ್ಮ ಮಾತಾ ಪಿತರ ಪೂಜೆಗೈಯುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸಾರ್ಹತೆ ಹೊಂದಿದ ಸುಭದ್ರ ಬಾಂಧವ್ಯ ಬಾಲ್ಯದಿಂದಲೇ ಹೃದಯಾಂತರಾಳದಲ್ಲಿ ಬೇರೂರುವಂತೆ ಮಾಡುವ ಪವಿತ್ರ ಕಾರ್ಯ ಇದಾಗಿದೆ. ಇದರಂತೆ ಗುರುಪೂರ್ಣಿಮಾ ಆಚರಣೆಯ ಪ್ರಯುಕ್ತ ನಡೆದ ಸಂಸ್ಕೃತಿ ಪೂಜೆಯನ್ನು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ದೀಪ ಬೆಳಗಿಸಿ ಉದ್ಘಾಟಿಸಿದರು.ರಾಮಕೃಷ್ಣ ಮಠದ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪಾಡಿ ಭಾಗವಹಿಸಿದ್ದರು. ಅವರು ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅವುಗಳ ಮಹತ್ವ ವನ್ನು ತಿಳಿಸಿದರು.ತಂದೆತಾಯಿಯನ್ನು ಪ್ರೀತಿಸಿ, ಗೌರವಿಸಿ, ಒಳ್ಳೆಯ ವ್ಯಕ್ತಿತ್ವ ವನ್ನು ರೂಪಿಸಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಭರಿತ ಮಾತುಗಳೊಂದಿಗೆ ಕರೆಯಿತ್ತರು.
ಯೋಗ ರತ್ನ ಗೋಪಾಲ ಕೃಷ್ಣ ದೇಲಂಪಾಡಿಯವರು ಅತಿಥಿಯಾಗಿ ಭಾಗವಹಿಸಿ “ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು, ಅಮೃತ ವಿದ್ಯಾಲಯಂ ಸಮಾಜದ ಹಿತದೃಷ್ಟಿಯಿಂದ ಉಳಿಸಿ ಬೆಳೆಸುವ ಕಾರ್ಯವನ್ನು ಅಚ್ಕುಕಟ್ಟಾಗಿ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸ್ವಾಮಿನಿ ಮಂಗಳಾಮೃತ ಪ್ರಾಣರವರ ನಿರ್ದೇಶನಾನುಸಾರ ಸಂಸ್ಕೃತಿ ಪೂಜೆಯ ವಿಧಿವಿಧಾನಗಳು ನಡೆದು ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ತಮ್ಮ ತಂದೆ ತಾಯಿಯರ ಪಾದಪೂಜೆಗೈದು ಸಂತೃಪ್ತರಾದರು. ಅವರು ಆಶೀರ್ವಚನವಿತ್ತು ನುಡಿದು ಸಂಸ್ಕೃತಿ ಪೂಜೆಯ ಮಹತ್ವವನ್ನು ವಿವರಿಸಿದರು.
ಶಿಕ್ಷಕ ಅಭಿಷೇಕ್ ಅವರ ಮಾರ್ಗದರ್ಶನದಲ್ಲಿ ಆಯುಧ್ ತಂಡ ಮತ್ತು ವಿದ್ಯಾರ್ಥಿಗಳಿಂದ ಗುರು ಸ್ತೋತ್ರ ಅಷ್ಟೋತ್ತರ ಪಠನೆ ಹಾಗೂ ಭಜನೆಗಳು ನೆರೆದಿದ್ದ ಪೋಷಕರ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿತು.
ವೇದಿಕೆಯಲ್ಲಿ ಶಾಲಾಆಡಳಿತಾಧಿಕಾರಿ ದೀಪ ಮನೋಜ್,ಉಪಸ್ಥಿತರಿದ್ದರು.
ಶಿಕ್ಷಕಿ ರೇಖಾ ಕಾಮತ್ ಸ್ವಾಗತಿಸಿದರು. ಶಿಕ್ಷಕಿ ವನಮಾಲ ಶೆಣೈ ವಂದಿಸಿದರು.
ಶಾಲಾ ಶಿಕ್ಷಕಿ ಶ್ವೇತಾ ನಿರೂಪಿಸಿದರು.ಭಾಗವಹಿಸಿದ ಸರ್ವರಿಗೂ ಪ್ರಸಾದ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಕ್ಕಳ ಪೋಷಕರು, ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.