ಮಂಗಳೂರು ; ದುಬೈನಿಂದ ಮಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ವಿಮಾನದಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಭದ್ರತಾ ಸಂಯೋಜಕ ಸಿದ್ದಾರ್ಥ ದಾಸ್ ಅವರು ದೂರು ಸಲ್ಲಿಸಿದ್ದು , ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಕೇರಳದ ಕಣ್ಣೂರಿನ ಮುಹಮ್ಮದ್ ಬಿ.ಸಿ. ಎಂಬಾತ ಮೇ 8ರಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಅಶಿಸ್ತಿನ ವರ್ತನೆಯಿಂದ ವಿಮಾನದ ಹಾರಾಟಕ್ಕೆ ಅಡ್ಡಿಪಡಿಸಿ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮಾಡಿದ್ದ ಎನ್ನಲಾಗಿದೆ. ವಿಮಾನದಿಂದ ಸಮುದ್ರಕ್ಕೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದರಿಂದ ಅವರ ಅನುಚಿತ ವರ್ತನೆ ಇತರರಿಗೆ ತೊಂದರೆ ಉಂಟುಮಾಡಿದೆ . ಇಳಿದ ನಂತರ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು ಮತ್ತು ಅಗತ್ಯ ಕ್ರಮಕ್ಕಾಗಿ ಔಪಚಾರಿಕ ದೂರನ್ನು ನೀಡಿದರು.
ಅದರಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2024 u/s 336 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.