ಮಂಗಳೂರು : ರಾಜ್ಯದ ನಾಡ ಹಬ್ಬವಾದ ದಸರಾ ಮಹೋತ್ಸವವನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ವರ್ಷಂ ಪ್ರತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ, ಮೈಸೂರು ದಸರಾವನ್ನು ಹೊರತು ಪಡಿಸಿದರೆ ಮಂಗಳೂರು ನಗರದಲ್ಲಿ ಜರುಗುವ ದಸರರಾವು ಸರ್ವ ಧರ್ಮಗಳನ್ನು ಒಳಗೊಂಡು ಭಾವೈಕತೆಯಿಂದ ಮತ್ತು ಧಾರ್ಮಿಕವಾಗಿ ಅತ್ಯಂತ ಶ್ರದ್ದಾ ಭಕ್ತಿಯಿಂದ, ಆಚರಿಸುವ ಎರಡನೇ ಪ್ರಸಿದ್ದ ದಸರವಾಗಿರುತ್ತದೆ. ಅಲ್ಲದೇ ಮಂಗಳೂರು ದಸರಾವು ದೇಶ ವಿದೇಶಗಳಲ್ಲಿಯೂ ಸಹ ಖ್ಯಾತಿ ಪಡೆದಿದ್ದು, ಈ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ರಾಜ್ಯ ಮತ್ತು ಅಂತರ್ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಈ ಬಾರಿ ದಸರಾ ಮಹೋತ್ಸವನ್ನು ರಾಜ್ಯ ಸರ್ಕಾರವು ಅರ್ಥ ಪೂರ್ಣವಾಗಿ ಮತ್ತು ಸಾಂಪ್ರಾದಾಯಿಕವಾಗಿ ಆಚರಿಸುತ್ತಿರುವುದರಿಂದ, ಮಂಗಳೂರು ದಸರವನ್ನು ಸಹ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ನಿರ್ದೇಶನದಂತೆ ಅತ್ಯಂತ ಶ್ರದ್ದಾ ಭಕ್ತಿ ಮತ್ತು ಅರ್ಥ ಪೂರ್ಣವಾಗಿ ಆಚರಿಸಲು ಮತ್ತು ಈ ಸಂಧರ್ಭದಲ್ಲಿ ನಗರದ ಸೌಂದರೀಕರಣ ಮತ್ತು ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಹಾಗೂ ನಗರದ ಪ್ರಮುಖ ಶ್ರದ್ದಾ ಕೇಂದ್ರಗಳ ರಸ್ತೆಗಳಲ್ಲಿ ದೀಪಾಲಂಕಾರವನ್ನು ಮಾಡಿ ದಸರದ ಮೆರಗನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂ ರಾವ್, ರವರು ಸೂಚನೆ ನೀಡಿರುತ್ತಾರೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ, ದಸರಾ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಮತ್ತು ನಗರದ ಪ್ರಮುಖ ಶ್ರದ್ದಾ ಕೇಂದ್ರಗಳ ರಸ್ತೆಗಳಲ್ಲಿ ಪಾಲಿಕೆಯ ವತಿಯಿಂದ ದೀಪಾಲಂಕಾರವನ್ನು ಮಾಡಲಾಗಿದೆ. ಅಲ್ಲದೇ ನಗರದ ಸ್ವಚ್ಚತೆ ಮತ್ತು ನೈರ್ಮಲ್ಯ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸಹ ಮಾನ್ಯ ಸಚಿವರು ಸೂಚಿಸಿರುತ್ತಾರೆ.
ನವರಾತ್ರಿಯ ಈ ಸುಸಂಧರ್ಭದಲ್ಲಿ ಮಂಗಳೂರಿನ ಮಹಾ ಜನತೆಗೆ ದಸರ ಮಹೋತ್ಸವದ ಶುಭಾಶಯಗಳನ್ನು ಸಹ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಆನಂದ್ ಎಸ್. ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದ್ದಾರೆ.