ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಭಾರಿ ತುಂತುರು ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಸಂಜೆಯ ವೇಳೆ ಮೋಡ ಕವಿದ ವಾತಾವರಣವಿದ್ದು ಸೋಮವಾರ ಮುಂಜಾನೆ ವೇಳೆ ಗಾಳಿಮಳೆಯಾಗಿದೆ.ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿಯಲ್ಲಿ ರಸ್ತೆ ಹದಗೆಟ್ಟ ಪರಿಣಾಮ ಕಲ್ಲಡ್ಕದ ಕುದುರೆಬೆಟ್ಟು ಎಂಬಲ್ಲಿ ಕಾರೊಂದು ಪಲ್ಟಿಯಾಗಿದೆ. ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ನಿಂತಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ತೌಸಿಫ್ ಅತಿವೇಗದಲ್ಲಿ ಚಲಾಯಿಸುತ್ತಿದ್ದ ಟಾಟಾ ನ್ಯಾನೋ ಕಾರು ಪಲ್ಟಿ ಹೊಡೆದರೂ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಲ್ಲಡ್ಕದ ಸರ್ವೀಸ್ ರಸ್ತೆಯಲ್ಲಿ ಡಾಂಬರು ಇಲ್ಲದಿರುವುದರಿಂದ ವಾಹನ ಸವಾರರು ಹಾಗೂ ಚಾಲಕರು ತೊಂದರೆ ಅನುಭವಿಸುವಂತಾಗಿದೆ.
ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆ, ಉಪ್ಪಿನಂಗಡಿ, ಕರಾಯ ಕಲ್ಲೇರಿ, ಬಂದಾರು, ಪೆರ್ನೆ, ಇಳಂತಿಲ, ಪುತ್ತೂರು, ಬಲ್ನಾಡು, ಕಡಬ, ಬಂಟ್ವಾಳ, ಬಿ ಸಿ ರೋಡ್, ಸುಬ್ರಹ್ಮಣ್ಯ, ಪಂಜ, ವಿಟ್ಟಲ, ಕನ್ಯಾನ, ಮಂಜೇಶ್ವರ, ಬಾಯಾರು, ಬಳ್ಪ ಸೇರಿದಂತೆ ಹಲವು ಕಡೆ ಭಾರೀ ಗಾಳಿ ಮಳೆಯಾಗಿದೆ.
ಕಡಬ, ಬಿಳಿನೆಲೆ, ಸುಬ್ರಹ್ಮಣ್ಯ, ಪಂಜ, ಕಾಣಿಯೂರು, ಆಲಂಗಾರುಗಳಲ್ಲೂ ಭಾರಿ ಮಳೆಯಾಗಿದೆ. ಮರ್ಧಾಳ-ಕೊಣಾಜೆ ಸಂಪರ್ಕ ರಸ್ತೆಯ ಕೀನ್ಯಾ ಎಂಬಲ್ಲಿ ಮರ ಉರುಳಿ ಬಿದ್ದ ಪರಿಣಾಮ ಆಟೋರಿಕ್ಷಾವೊಂದು ಢಿಕ್ಕಿಯಾಗಿದ್ದು, ಕೊಂಬಾರು ಎಂಬಲ್ಲಿ ಸಿಡಿಲು ಬಡಿದು ತೆಂಗಿನ ಮರ ಬಿದ್ದಿದೆ.ಮೊದಲ ಮಳೆಗೆ ಜಿಲ್ಲಾಡಳಿತ ತಯಾರಿಯಾಗದೆ ಇರುವುದರಿಂದ ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗದೆ ನೀರು ನಿಂತು ಕೃತಕ ನೆರೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ .