ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ದೇವಸ್ತಾನ ಮಠದ ಮಠದ ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕ ಮೋಹನ್ ಗೌಡ ತಿಳಿಸಿದ್ದಾರೆ.
ಅವರು ಮಂಗಳೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಪರಿಷತ್ತಿನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. “ದೇವಾಲಯಗಳು ಹಿಂದೂಗಳಿಗೆ ಪವಿತ್ರ ಸ್ಥಳಗಳಾಗಿವೆ. ಅನೇಕ ಜನರು ಅನಾಗರಿಕ ಉಡುಪುಗಳನ್ನು ಧರಿಸಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಇದು ದೇವಾಲಯದ ಪಾವಿತ್ರ್ಯತೆಯನ್ನು ಕಲುಷಿತಗೊಳಿಸುತ್ತದೆ” ಎಂದು ಗೌಡ ಹೇಳಿದರು.
100 ಕ್ಕೂ ಹೆಚ್ಚು ದೇವಸ್ಥಾನಗಳು ಸ್ವಯಂಪ್ರೇರಿತವಾಗಿ ಡ್ರೆಸ್ ಕೋಡ್ ಅನ್ನು ಕಡ್ಡಾಯವಾಗಿ ಪರಿಚಯಿಸಲು ಒಪ್ಪಿಕೊಂಡಿವೆ. ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕುರಿತು ಬೋರ್ಡ್ ಅಳವಡಿಸಿ, ದೇವಸ್ಥಾನಗಳಿಗೆ ಭೇಟಿ ನೀಡುವವರಲ್ಲಿ ಜಾಗೃತಿ ಮೂಡಿಸಲಾಗುವುದು. ಯಾರಾದರೂ ಅಸಭ್ಯ ವಸ್ತ್ರ ಧರಿಸಿ ಬಂದರೆ ಅವರಿಗೆ ದೇವಸ್ಥಾನದಲ್ಲಿ ಸಾತ್ವಿಕ ಉಡುಗೆ ನೀಡಲು ಕ್ರಮಕೈಗೊಳ್ಳಲಾಗುವುದು. ಹಂತ ಹಂತವಾಗಿ ಡ್ರೆಸ್ ಕೋಡ್ ಜಾರಿಗೊಳಿಸಲಾಗುವುದು,’’ ಎಂದರು.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ, ದೇವಸ್ಥಾನಗಳ ರಕ್ಷಣೆಗೆ ಒಗ್ಗಟ್ಟಿನಿಂದ ಹೋರಾಟ ಮಾಡುವ ಅಗತ್ಯವಿದೆ. ಹಿಂದೂ ಧರ್ಮವನ್ನು ಉಳಿಸುವಲ್ಲಿ ದೇವಾಲಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ರಾಮಕೃಷ್ಣ ಮಠದ ಮಂಗಳೂರು ಅಧ್ಯಕ್ಷ ಜಿತಕಾಮಾನಂದಜಿ ಮಾತನಾಡಿ, ‘ದೇವಸ್ಥಾನಗಳು ಕೇವಲ ಪೂಜೆಗೆ ಸೀಮಿತವಾಗಬಾರದು, ಸಂಸ್ಕೃತಿ, ಕಲೆ ಉಳಿಸುವ ತಾಣವಾಗಬೇಕು, ದೇವಸ್ಥಾನಗಳು ಧರ್ಮಪರಂಪರೆ ಶಿಕ್ಷಣ ನೀಡಬೇಕು ಎಂದರು.
ಸನಾತನ ಸಂಸ್ಥೆ ಧರ್ಮಪ್ರಚಾರಕ ರಮಾನಂದಗೌಡ ಮಾತನಾಡಿ, ‘ದೇವಸ್ಥಾನಗಳು ಬಲಿಷ್ಠವಾದರೆ ಧರ್ಮ, ರಾಷ್ಟ್ರ, ಸಮಾಜವೂ ಬಲಿಷ್ಠವಾಗುತ್ತದೆ’ ಎಂದರು. ಶಿಥಿಲಾವಸ್ಥೆಯಲ್ಲಿರುವ ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅನುಕೂಲ ಮಾಡಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಲು ಮಹಾಸಂಘ ನಿರ್ಧರಿಸಿದೆ. ಸರಕಾರ ಸರ್ವೆ ನಡೆಸಿ ದೇವಸ್ಥಾನಗಳಿರುವ ಜಾಗ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.
ದೇಗುಲ ಭೂಮಿ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ದೇವಸ್ಥಾನ, ಪುಣ್ಯ ಕ್ಷೇತ್ರಗಳ ಬಳಿ ಮಾಂಸ, ಮದ್ಯ ಮಾರಾಟ ನಿಷೇಧಿಸುವ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ನಿಧಿಯನ್ನು ಇತರ ಉದ್ದೇಶಗಳಿಗೆ ಬಳಸಬಾರದು. ದೇವಸ್ಥಾನದ ಜಾತ್ರೆಗಳಲ್ಲಿ ಅನ್ಯ ಧರ್ಮೀಯರು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಬಾರದು ಎಂದರು.


