ಮಂಗಳೂರು : ವೆಲೆನ್ಸಿಯಾದ ಸೇಂಟ್ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅನುಚಿತ ವರ್ತನೆ ತೋರಿದ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಶಾಸಕ ಡಾ.ಭರತ್ ವೈ ಶೆಟ್ಟಿ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಮಾಜಿ ಎಂಎಲ್ ಸಿ ಐವನ್ ಡಿಸೋಜ ಬುಧವಾರ ತಿಳಿಸಿದ್ದಾರೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿಸೋಜ, ”ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಶಾಸಕ ಡಾ.ಭರತ್‌ವೈ ಶೆಟ್ಟಿ ಮತ್ತು ವೇದವ್ಯಾಸ್ ಕಾಮತ್ ಅವರು ಸಮಸ್ಯೆ ಬಗೆಹರಿಸುವ ಬದಲು ಅನುಚಿತವಾಗಿ ವರ್ತಿಸಿದ್ದು ಖೇದಕರ ಎಂದರು. ಶಾಸಕರು ವಿದ್ಯಾರ್ಥಿಗಳನ್ನು ಶಾಲೆಯ ಆವರಣದ ಹೊರಗೆ ಕೂಡಿಹಾಕಿ, ಶಿಕ್ಷಕರನ್ನು ನಿಂದಿಸಿ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ, ಇದು ಖಂಡನೀಯ ಮತ್ತು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐವನ್ ಡಿಸೋಜ, ಇಬ್ಬರು ನಾಯಕರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆಯೂ ಒತ್ತಾಯಿಸಲಾಗುವುದು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ ಅವರು, ಶಾಸಕರು ತಮ್ಮ ಜವಾಬ್ದಾರಿಯನ್ನು ಮರೆತು ಸುಮಾರು ಆರು ದಶಕಗಳ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಯ ಹೆಸರನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಜೆ.ಆರ್.ಲೋಬೋ, ಪಿ.ವಿ.ಮೋಹನ್, ಎ.ಸಿ.ವಿನಯರಾಜ್, ನವೀನ್ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.


