Wednesday, November 5, 2025
Flats for sale
Homeಜಿಲ್ಲೆಮಂಗಳೂರು : ಜು.26 ರಂದು 'ಭಾರತೀಯ ರೆಡ್ ಕ್ರಾಸ್ ಸೋಸೈಟಿ ಶತಮಾನೋತ್ಸವ ಕಟ್ಟಡ' ದ ಉದ್ಘಾಟನೆ...

ಮಂಗಳೂರು : ಜು.26 ರಂದು ‘ಭಾರತೀಯ ರೆಡ್ ಕ್ರಾಸ್ ಸೋಸೈಟಿ ಶತಮಾನೋತ್ಸವ ಕಟ್ಟಡ’ ದ ಉದ್ಘಾಟನೆ ..!

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ (ಐಆರ್‌ಸಿಎಸ್) ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಭಾರತೀಯ ರೆಡ್‌ ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡ ‘ದ ಉದ್ಘಾಟನಾ ಸಮಾರಂಭ ಜು.26ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಚೆರ್ಮಾನ್ ಸಿ.ಎ ಶಾಂತರಾಮ ಶೆಟ್ಟಿಯವರು ತಿಳಿಸಿದ್ದಾರೆ.

ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದು. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್.ಡಿ., ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಐಆರ್‌ಸಿಎಸ್‌ ರಾಜ್ಯ ಘಟಕದ ಚೇರ್ಮನ್ ಬನ್ನೂರು ರಾಜೀವ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಐಪಿಎಸ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸುಮಾರು 20 ಸಾವಿರ ಚದರ ಅಡಿಯ ಭವ್ಯ ಶತಮಾನೋತ್ಸವ ಕಟ್ಟಡ ತಳ ಅಂತಸ್ತು, ನೆಲ ಅಂತಸ್ತು ಸಹಿತ ಒಟ್ಟು 4 ಅಂತಸ್ತು ಹೊಂದಿದ್ದು. ನೆಲ ಅಂತಸ್ತಿನಲ್ಲಿ ಕಚೇರಿ, ಸಂದರ್ಶಕರ ಕೊಠಡಿ, ಮೀಟಿಂಗ್ ಹಾಲ್, 1ನೇ ಅಂತಸ್ತಿನಲ್ಲಿ 300 ಆಸನಗಳ ‘ಪ್ರೇರಣಾ’ ಹವಾ ನಿಯಂತ್ರಿತ ಸಭಾಂಗಣ, 2ನೇ ಅಂತಸ್ತಿನಲ್ಲಿ ಸುಮಾರು 500 ಮಂದಿ ಸಾಮರ್ಥ್ಯದ ‘ಸೀ ವ್ಯೂ’ಸಭಾಂಗಣವಿದೆ. ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ ಎಂದರು.

ದಶಕಗಳ ಹಿಂದೆ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧಿಕಾರಿ ಕಛೇರಿಯ ಒಂದು ಸಣ್ಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2007ರಲ್ಲಿ ಆಗಿನ ಜಿಲ್ಲಾಧಿಕಾರಿಯವರು ತಮ್ಮ ಕಚೇರಿ ಆವರಣದಲ್ಲಿಯೇ ರೆಡ್‌ ಕ್ರಾಸ್‌ಗೆ ನಿವೇಶನ ನೀಡಿದ್ದು, 2011ರಲ್ಲಿ ರೆಡ್‌ ಕ್ರಾಸ್‌ನ ಸ್ವಂತ ಕಟ್ಟಡ ಆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾ ರೆಡ್‌ಕ್ರಾಸ್‌ನ ಸೇವಾ ಚಟುವಟಿಕೆಗಳ ವ್ಯಾಪ್ತಿ ವಿಸ್ತಾರವಾಗಿದ್ದು, ಸಂಸ್ಥೆಯ ಯೋಜನೆಗಳಾದ ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಯ ತರಬೇತಿ ಸಹಿತ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 2021ರಲ್ಲಿ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮಾನವೀಯ ಸೇವೆಗಾಗಿ ಸ್ವಿಝರ್ಲೆಂಡ್‌ ಹೆನ್ರಿ ಡ್ಯೂನಾಂಟ್ ಅವರು 1863ರಲ್ಲಿ ಸ್ಥಾಪಿಸಿದ ರೆಡ್ ಕ್ರಾಸ್ ಸೊಸೈಟಿ ವಿಶ್ವದ ವಿವಿಧ ದೇಶಗಳಲ್ಲಿ ಘಟಕ ಹೊಂದಿದೆ. 1920ರಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆಯಾಗಿದ್ದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸುಮಾರು 7 ದಶಕದ ಇತಿಹಾಸ ಹೊಂದಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯದ ಮುಂಚೂಣಿಯ ಘಟಕವಾಗಿ ಗುರುತಿಸಿಕೊಂಡಿದೆ. ಮಾನವೀಯ ತತ್ವಗಳನ್ನು ಬೆಳೆಸುವುದು, ಆರೋಗ್ಯ ಕಾರ್ಯಕ್ರಮ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದು, ಯೂತ್ ರೆಡ್ಕ್ರಾಸ್, ಜೂನಿಯರ್ ರೆಡ್‌ ಕ್ರಾಸ್ ಘಟಕಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.

  • ರೆಡ್‌ ಕ್ರಾಸ್ ರಕ್ತನಿಧಿ

ಮಂಗಳೂರು ನಗರದ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆಡ್‌ ಕ್ರಾಸ್‌ನ ರಕ್ತನಿಧಿ ಕೇಂದ್ರ (ಬ್ಲಡ್ ಬ್ಯಾಂಕ್) ವರ್ಷದ 365 ದಿನ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು, ಬಾಣಂತಿಯರು ಸಹಿತ ಅವಶ್ಯ ಇರುವ ರೋಗಿಗಳಿಗೆ ಉಚಿತವಾಗಿ ರಕ್ತದ ಯುನಿಟ್‌ಗಳನ್ನು ನೀಡುತ್ತಿರುವುದು ಮಹತ್ವದ ಸಾಧನೆಯಾಗಿ ಪ್ರತಿ ತಿಂಗಳು ಸುಮಾರು 500 ಯುನಿಟ್ ರಕ್ತ ಉಚಿತವಾಗಿ ನೀಡಲಾಗುತ್ತಿದೆ.

ನಮ್ಮ ರೆಡ್‌ಕ್ರಾಸ್ ರಕ್ತನಿಧಿ ನಿರಂತರವಾಗಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೋವಿಡ್ ಸಂದರ್ಭ ಅರ್ಹ ಫಲಾನುಭವಿಗಳಿಗೆ 10 ಲಕ್ಷ ರೂ. ಮೌಲ್ಯದ ಕಿಟ್ ವಿತರಣೆ, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ ಸುಮಾರು 4000 ಮಂದಿಗೆ ಉಚಿತ ವ್ಯಾಕ್ಸಿನೇಶನ್ ಸೌಲಭ್ಯ, ಸರ್ಕಾರಿ ವೆಸ್ಲಾಕ್, ಆಸ್ಪತ್ರೆಯಲ್ಲಿ ರೆಡ್‌ ಕ್ರಾಸ್‌ನಿಂದ ವಾಚನಾಲಯ ಸ್ಥಾಪಿಸಲು ಸಹಾಯಹಸ್ತ ಸಹಿತ ಹಲವಾರು ಚಿ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ.

ದ.ಕ ಜಿಲ್ಲಾ ರೆಡ್‌ ಕ್ರಾಸ್ ಶತಮಾನೋತ್ಸವ ಭವನ ಒಂದು ಸೇವಾಕಾರ್ಯದ ಕ್ರಿಯಾಶೀಲ ಚಟುವಟಿಕೆಯ ಕೇಂದ್ರವಾಗಿ ಮೂಡಿ ಬರುವ ಆಶಯವಿದೆ. ಇದು ಜಿಲ್ಲೆಯ ಎಲ್ಲ ರೆಡ್‌ ಕ್ರಾಸ್ ಸದಸ್ಯರ ಹೆಮ್ಮೆಯ ಪ್ರತೀಕವಾಗಲಿದೆ. ರಾಜ್ಯ ರೆಡ್ ಕ್ರಾಸ್ ಶಾಖೆಯ ನಿರಂತರ ಬೆಂಬಲ, ದಾನಿಗಳ ಉದಾರತೆ, ರೆಡ್ ಕ್ರಾಸ್ ಸದಸ್ಯರ ಪ್ರೋತ್ಸಾಹ ಸ್ವಾರ್ಥ ರಹಿತ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಸತೀಶ್ ರಾವ್, ಉಪಾಧ್ಯಕ್ಷರು, ಮೋಹನ್ ಶೆಟ್ಟಿ, ಖಜಾಂಜಿ -ಕಿಶೋರ್‌ಚಂದ್ರ ಹೆಗ್ಡೆ ಕಾರ್ಯದರ್ಶಿ) ಪುಷ್ಪರಾಜ್ ಜೈನ್, ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಸುಮನಾ ಬೋಳಾ‌ರ್, ಗುರುದತ್ ನಾಯಕ್, ಎ.ವಿಠಲ, ಪಿ..ಬಿ.ಹರೀಶ್ ರೈ ( ನಿರ್ದೇಶಕರು) ಆಡಳಿತ ಸಮಿತಿ, ದ.ಕ ಜಿಲ್ಲಾ ರೆಡ್‌ ಕ್ರಾಸ್ ಸಮಿತಿ, ಯತೀಶ್ ಬೈಕಂಪಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular