ಮಂಗಳೂರು : ಚುನಾವಣಾ ಕರ್ತವ್ಯ ನಿರತ ವ್ಯಕ್ತಿಯೊಬ್ಬರು ವೈಯಕ್ತಿಕ ಕಾರಣದಿಂದ ನಗರದ ಡಿಸಿ ಕಚೇರಿ ಆವರಣದಲ್ಲಿ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎಪ್ರಿಲ್ 2 ರಂದು ನಡೆದಿದೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಶ್ರೀಧರ್ ಹೆಗಡೆ ಎಂದು ಗುರುತಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ತಂಡದ ಸದಸ್ಯರಾಗಿದ್ದಾರೆ. 2019 ರಿಂದ ಬೆಳ್ತಂಗಡಿ ಕಡಿರುದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಅವರ ಸ್ಥಾನಕ್ಕೆ ಬೇರೊಬ್ಬರು ವರ್ಗಾವಣೆಗೊಂಡಿದ್ದರಿಂದ, ಕಳೆದ ಫೆಬ್ರವರಿ ಮತ್ತು ಮಾರ್ಚ್‌ನಿಂದ ಶ್ರೀಧರ್ ಸರಿಯಾದ ಸ್ಥಾನ ಸಿಗಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಧರ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದ್ದರೂ, ಅವರನ್ನು ತೀವ್ರ ನಿಗಾಕ್ಕಾಗಿ ಐಸಿಯುಗೆ ವರ್ಗಾಯಿಸಲಾಗಿದೆ. ಅವರ ಪತ್ನಿ ಜಯಂತಿ ಬೆಳ್ತಂಗಡಿಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್, ಎಡಿಸಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಮ್ಮಯ್ಯ, ಹಾಗೂ ಇತರೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.


