Tuesday, October 21, 2025
Flats for sale
Homeಜಿಲ್ಲೆಮಂಗಳೂರು : ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ…!

ಮಂಗಳೂರು : ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ…!

ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಜಿಎಸ್‌ಟಿ ದರ ಕಡಿತದ ಮೂಲಕ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಇಳಿಸಿರುವುದು ಐತಿಹಾಸಿಕ ನಿರ್ಧಾರ. ಆದರೆ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ತಪ್ಪು ನಿರ್ಧಾರಗಳಿಂದ ಆರ್ಥಿಕ ಸ್ಥಿತಿ ಹಳ್ಳ ಹಿಡಿಸಿರುವ ಸಿಎಂ ಸಿದ್ದರಾಮಯ್ಯನವರು ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಜನಪ್ರಿಯತೆ ಅರಗಿಸಿಕೊಳ್ಳಲು ಸಾಧ್ಯವಾಗದೆ ಸುಳ್ಳು ಹೇಳಿಕೆ ನೀಡುವ ಮೂಲಕ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಪುತ್ತೂರಿಗೆ ನಿನ್ನೆ ಭೇಟಿ ನೀಡಿದ್ದ ಸಿದ್ದರಾಮಯ್ಯನವರು ಕರ್ನಾಟಕ ಸೇರಿ ಇಡೀ ದೇಶದ ಜನರಿಗೆ ಅನುಕೂಲ ತಂದಿರುವ ಜಿಎಸ್‌ಟಿ ತೆರಿಗೆ ಇಳಿಕೆ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಕ್ಯಾ. ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಹತಾಶೆಯ ಹೇಳಿಕೆ “ಕೈಲಾಗದವನು ಮೈ ಪರಚಿಕೊಂಡ” ಎನ್ನುವಂತಿದೆ. ಅವರ ₹15,000 ಕೋಟಿ ಕರ್ನಾಟಕ್ಕೆ ನಷ್ಟ ಎಂಬ ಹೇಳಿಕೆಗೆ ಯಾವುದೇ ಆಧಾರವಿಲ್ಲ. ತಮ್ಮ ಸರ್ಕಾರದ ಆರ್ಥಿಕ ಅಧೋಗತಿಯನ್ನು ಮುಚ್ಚಿ ಹಾಕುವುದಕ್ಕೆ ಪದೇಪದೇ ಮೋದಿ ಸರ್ಕಾರದ ಮೇಲೆ ಗೂಬೆಕೂರಿಸುವ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಮೋದಿ ಸರ್ಕಾರವು ಜಿಟಿಎಸ್‌ ಸ್ಲ್ಯಾಬ್‌ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವುದರಿಂದ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆರ್ಥಿಕ ಲಾಭವುಂಟು ಮಾಡಿದೆ. ಆದರೆ, ಯಾವುದೇ ಅಂಕಿ-ಅಂಶ ಅಥವಾ ದಾಖಲೆಯಿಲ್ಲದೆ ಸಿದ್ದರಾಮಯ್ಯನವರು ಸಾರ್ವಜನಿಕ ವೇದಿಕೆಯಲ್ಲಿ ನಿಂತು ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮೋದಿಯವರು ಜಿಎಸ್ಟಿ ತಂದು ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಗದ್ದಲ ಎಬ್ಬಿಸುತ್ತಿದ್ದ ಕಾಂಗ್ರೆಸ್ಸಿಗರು, ಈಗ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ತಮ್ಮ ಸರ್ಕಾರಕ್ಕೆ ನಷ್ಟ ಆಗುತ್ತಿದೆ ಬೊಬ್ಬೆ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯನವರು ಈಗ ಕೇವಲ ರಾಜಕೀಯವಾಗಿ ಟೀಕಿಸಬೇಕೆಂಬ ಕಾರಣಕ್ಕಾಗಿ ಜಿಎಸ್‌ಟಿ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸ್ಪಷ್ಟ. ಕಾಂಗ್ರೆಸ್‌ ಸರ್ಕಾರ ತನ್ನ ಎಲ್ಲ ಆರ್ಥಿಕ ವೈಫಲ್ಯ, ಭ್ರಷ್ಟ ಆಡಳಿತ ಮತ್ತು ದುಂದು ವೆಚ್ಚಗಳಿಗೆ ಕೇಂದ್ರದ ಮೇಲೆ ದೂಷಣೆ ಮಾಡುವುದನ್ನೇ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಅಜೆಂಡಾ ಮಾಡಿಕೊಂಡಿದ್ದಾರೆ. ಅಸಂಬದ್ಧ ಗ್ಯಾರಂಟಿ ಯೋಜನೆ, ಮುಡಾ ಹಗರಣ, ವಾಲ್ಮೀಕಿ ಹಗರಣ ಹೀಗೆ ಸಿದ್ದರಾಮಯ್ಯನವರ ದುರಾಡಳಿತಕ್ಕೆ ದೊಡ್ಡ ಪಟ್ಟಿಯೇ ಇದೆ. ಇದನ್ನೆಲ್ಲ ಮುಚ್ಚಿ ಹಾಕುವುದಕ್ಕೆ ಇಡೀ ದೇಶವೇ ಸ್ವಾಗತಿಸಿರುವ ಜಿಎಸ್‌ಟಿ ಸುಧಾರಣೆಗಳ ಬಗ್ಗೆ ಈ ರೀತಿ ಬೇಜವಾಬ್ದಾರಿಯಿಂದ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಕ್ಯಾ. ಚೌಟ ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular