ಮಂಗಳೂರು ; ಅಖಿಲ ಭಾರತ ಬಿಲವರ ಯೂನಿಯನ್ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ 1912 ರಲ್ಲಿ ಕುದ್ರೋಳಿಯಲ್ಲಿ ಸ್ಥಾಪಿತವಾದ ಬಿಲ್ಲವರ ಹಿರಿತನದ ಮಾತೃ ಸಂಸ್ಥೆಯಾಗಿದ್ದು ಗುರುಗಳ ಸಂದೇಶ ಅನುಸಾರವಾಗಿ ಸಮಾಜವನ್ನು ಶೈಕ್ಷಣಿಕ ಮತ್ತು ಸಂಘಟಿತವಾಗಿ ಬಲಿಷ್ಠವಾಗಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಸಮಾಜವು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಸಮಾನತೆಯನ್ನು ತೊಡೆದು ಮುಂಚೂಣಿಯಲ್ಲಿರುವ ಯೂನಿಯನ್ ಹಲವಾರು ಕ್ರಾಂತಿಕಾರಿ ಯೋಜನೆಗಳಿಂದ ಸಾಧ್ಯವಾಗಿದೆ. ಮುಲ್ಕಿ, ಯಲ್ಲಿ ನಡೆದ ಪ್ರಪ್ರಥಮ ಬಿಲ್ಲವ ಸಮ್ಮೇಳನ, ನಾರಾಯಣ ಗುರು ವಿದ್ಯಾ ಸಂಸ್ಥೆ, ಮಹಿಳಾ ಸಮ್ಮೇಳನ, ಬಿಲ್ಲವ ಮಹಿಳಾ ಹಾಸ್ಟೆಲ್ ಇವುಗಳು ಪ್ರಮುಖ ಹೆಗ್ಗುರುತುಗಳಾಗಿದ್ದು ಪ್ರಸ್ತುತ ಯುವ ಸಮುದಾಯವನ್ನು ಸಂಘಟಿಸುವ ಪ್ರಮುಖ ಧೈಯದೊಂದಿಗೆ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ ವನ್ನು ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು ತಿಳಿಸಿದ್ದಾರೆ.

ಆದಿನ ಬೆಳಿಗ್ಗೆ 8 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ವಿಶ್ವಕಪ್ ಮಹಿಳಾ ಕಬ್ಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಆಟಗಾರ್ತಿ ಕು. ಧನಲಕ್ಷ್ಮೀ ಪೂಜಾರಿಯವರ ನೇತೃತ್ವದಲ್ಲಿ ಕ್ರೀಡಾ ಕ್ಷೇತ್ರದಿಂದ ಅದ್ಭುತ ‘ಸಾಧನೆಗೈದ ಆಟಗಾರರ ಜತೆಗೂಡುವಿಕೆಯಲ್ಲಿ ಕ್ರೀಡಾ ಜ್ಯೋತಿ ಮೆರವಣಿಗೆಯು ನಾರಾಯಣ ಗುರು ವೃತ್ತವಾಗಿ, ಲಾಲ್ ಭಾಗ್, ಕೆ.ಎಸ್.ರಾವ್ ಮಾರ್ಗವಾಗಿ ನೆಹರು ಮೈದಾನಕ್ಕೆ ತಲುಪಲಿದೆ ಎಂದರು.
ಬಳಿಕ ಬೆಳಿಗ್ಗೆ 9 ಘಂಟೆಗೆ ದಾಮೋದರ ಆರ್.ಸುವರ್ಣ ವೇದಿಕೆಯಲ್ಲಿ ಸಾಗರ್ ಗ್ರೂಪ್ ಆಫ್ ಹೊಟೇಲ್, ಓಶಿಯನ್ ಪರ್ಲ್ ಹೊಟೇಲಿನ ಛೇರ್ ಮ್ಯಾನ್ ಜಯರಾಮ್ ಬನಾನ್ ಮತ್ತು ಮೈಸೂರಿನ ಪೂಜಾರಿ ಫಿಶ್ ಲ್ಯಾಂಡ್ನ ಮಾಲಕರಾದ ಎಲ್. ಸುಧಾಕರ ಪೂಜಾರಿಯವರು ಉದ್ಘಾಟಿಸಲಿದ್ದಾರೆ. ಬಳಿಕ ಕ್ರೀಡಾ ಕೂಟ ಆರಂಭವಾಗಲಿದೆ. ಮಹಿಳೆಯರಿಗೆ ತೋಬಾಲ್ ಮತ್ತು ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಮತ್ತು ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾವಳಿಗಳು ನಡೆಯಲಿದೆ. ಈಗಾಗಲೇ ಸರ್ವ ಬಿಲ್ಲವ ಸಂಘಗಳ ಸಹಕಾರದೊಂದಿಗೆ ಈ ಬಗ್ಗೆ ಸಭೆಗಳು ನಡೆದು, ತಂಡಗಳ ನೋಂದಣಿ ಆಗಿರುತ್ತದೆ ಎಂದು ಹೇಳಿದರು.
ಸಂಜೆ 5.00 ಘಂಟೆಗೆ ಕರಾವಳಿ ಕರ್ನಾಟಕದ ಪ್ರಖ್ಯಾತ ಗಾಯಕರಾದ ಪ್ರಕಾಶ್ ಮಹಾದೇವನ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಆಗಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಮಾನ್ಯ ಸದಸ್ಯರಾದ ಬಿ.ಕೆ.ಹರಿರ್ಪಸಾದ್, ಕೇಂದ್ರ ಸಚಿವರಾದ ಶ್ರೀಪದ್ ನಾಯಕ್, ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಮಧು ಬಂಗಾರಪ್ಪ, ಸಂಸದರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕರುಗಳಾದ ವಿ.ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಚಲನಚಿತ್ರ ನಟರು, ಕ್ರೀಡಾ ಕ್ಷೇತ್ರದ ಪ್ರಮುಖರು, ವಿವಿಧ ಕ್ಷೇತ್ರದ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು, ಕ್ರೀಡಾ ಪ್ರಧಾನ ಸಂಚಾಲಕರು ಸದಾನಂದ ಪೂಜಾರಿ, ಕ್ರೀಡಾ ಖಜಾಂಜಿ ಜಯಪ್ರಕಾಶ್, ಹಾಗೂ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷರು ಶ್ರೀಮತಿ ಸುಮಲತಾ ಎನ್. ಸುವರ್ಣ ರವರು ಉಪಸ್ಥಿತರಿದ್ದರು.


