ಮಂಗಳೂರು : ಇತ್ತೀಚೆಗೆ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ಕಾರು ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದೆ. ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ಬಳಿ ಮಾರುತಿ ರಿಡ್ಜ್ ಕಾರು ಹೊತ್ತಿ ಉರಿದ ಘಟನೆ ನಡೆದಿದೆ.
ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಂಡು ಬಂದ ಹಿನ್ನೆಲೆಯಲ್ಲಿ ಕಾರಿನಲ್ಲಿ ಪ್ರಯಾಣಿಕರು ತಕ್ಷಣ ಕಾರಿನಿಂದ ಹೊರ ಬಂದಿದ್ದಾರೆ. ಹೀಗಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಕೆಲವೇ ಕ್ಷಣದಲ್ಲಿ ಸುಟ್ಟು ಕರಕಲಾಗಿದೆ. ಕಾರಿನಲ್ಲಿ ತಾಂತ್ರಿಕ ದೋಷದಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ರಸ್ತೆಯ ನಡುವೆ ಕಾರಿಗೆ ಬೆಂಕಿ ತಗುಲಿದ್ದ ಕಾರಣ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕೆಲ ಕಾಲ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ಬಳಿಕ ಅಗ್ನಿಶಾಮಕದಳದವರು ಬಂದು ಕಾರಿನ ಬೆಂಕಿ ನಂದಿಸಿದ್ದು, ಸಂಚಾರ ಸಹಜ ಸ್ಥಿತಿಗೆ ಮರಳಿದೆ. ವಾರದ ಹಿಂದೆಯಷ್ಟೆ ಮಂಗಳ ಸ್ಟೇಡಿಯಂ ಬಳಿಯಲ್ಲೂ ಮಾರುತಿ ಕಾರೊಂದು ಪೆಟ್ರೋಲ್ ಬಂಕ್ ಬಳಿಯಲ್ಲೇ ಹೊತ್ತಿ ಉರಿದಿತ್ತು.ತಲಪಾಡಿ ಮೂಲದ ಅಂಕಿತ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಎಂದು ತಿಳಿದುಬಂದಿದೆ.