Sunday, March 15, 2026
Flats for sale
Homeಜಿಲ್ಲೆಮಂಗಳೂರು : ಕ್ರೈಸ್ತ ಯುವಕನಿಂದ ಜಾರಂದಾಯ ದೈವದ ನೇಮ,ಸನಾತನ ಕಟ್ಟುಕಟ್ಟಳೆಗಳನ್ನು ಗಾಳಿಗೆ ತೂರಲಾಗಿದೆ ಎಂದು ತುಳು...

ಮಂಗಳೂರು : ಕ್ರೈಸ್ತ ಯುವಕನಿಂದ ಜಾರಂದಾಯ ದೈವದ ನೇಮ,ಸನಾತನ ಕಟ್ಟುಕಟ್ಟಳೆಗಳನ್ನು ಗಾಳಿಗೆ ತೂರಲಾಗಿದೆ ಎಂದು ತುಳು ವಿದ್ವಾಂಸರು ಹಾಗೂ ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಗಂಭೀರ ಆರೋಪ.

ಮಂಗಳೂರು : ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ಎಂದೂ ಕೇಳರಿಯದ ಘಟನೆಯೊಂದು ಸಂಭವಿಸಿದ್ದು, ಪವಿತ್ರ ನೇಮದ ಸಂದರ್ಭದಲ್ಲಿ ಅನ್ಯಕೋಮಿನ (ಕ್ರಿಶ್ಚಿಯನ್) ವ್ಯಕ್ತಿಯನ್ನು ದೈವ ನರ್ತನ ಸೇವೆಗೆ ಬಳಿಸಿಕೊಳ್ಳುವ ಮೂಲಕ ಸನಾತನ ಕಟ್ಟುಕಟ್ಟಳೆಗಳನ್ನು ಗಾಳಿಗೆ ತೂರಲಾಗಿದೆ ಎಂದು ತುಳು ವಿದ್ವಾಂಸರು ಹಾಗೂ ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಗಂಭೀರ ಆರೋಪ ಮಾಡಿದ್ದಾರೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಸಮಗ್ರ ಮಾಹಿತಿ ನೀಡಿದರು.

ದಿನಾಂಕ 01.02.2026ರಂದು ಮಂಗಳೂರಿನ ಬೋಳೂರು ಜಾರಂದಾಯ ದೈವಸ್ಥಾನದಲ್ಲಿ ನಡೆದ ನೇಮದಲ್ಲಿ ಈ ಘಟನೆ ನಡೆದಿದೆ. ಬಂಟ ದೈವನರ್ತಕನಾಗಿ ಒಬ್ಬ ಕ್ರಿಶ್ಚಿಯನ್ ಸಮುದಾಯದ ಯುವಕನನ್ನು ನರ್ತನ ಸೇವೆಗೆ ಬಳಸಿಕೊಳ್ಳಲಾಗಿದೆ. ದಿವಂಗತ ಗಣೇಶ್ ಪಂಬದ ಎಂಬುವವರ ಕ್ರಿಶ್ಚಿಯನ್ ಪತ್ನಿಗೆ ಜನಿಸಿದ ಪುತ್ರನನ್ನು ಸಂಪ್ರದಾಯಬದ್ಧ ನೇಮ ಕಟ್ಟಲು ಬಳಸಿರುವುದು ದೈವಾರಾಧನೆಯ ಮೂಲ ನಂಬಿಕೆಗೆ ಧಕ್ಕೆ ತಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ಬಾರಿಯ ನೇಮದ ಜವಾಬ್ದಾರಿಯನ್ನು ಕೇರಳದ ಚಿಪ್ಪಾರು ಬಾಯಾರಿನ ಗಣೇಶ್ ಪಂಬದ ಹಾಗೂ ಆತನ ಅಕ್ಕನ ಮಗ ಸೂರಜ್ ವಹಿಸಿಕೊಂಡಿದ್ದರು. ಅರ್ಹ ಪಂಬದ ಸಮುದಾಯದ ನರ್ತಕರನ್ನು ಮತ್ತು ಪೂರಕ ಪರಿಚಾರಕ ವರ್ಗವನ್ನು ನೇಮಿಸುವ ಬದಲಾಗಿ, ಕಡಿಮೆ ಸಂಬಳ ನೀಡುವ ಹಿತಾಸಕ್ತಿಯಿಂದ ಅಡ್ಡದಾರಿಯನ್ನು ಹಿಡಿದಿದ್ದಾರೆ. ಈ ಲಾಭದ ಆಸೆಯು ತುಳುನಾಡಿನ ಪವಿತ್ರ ದೈವಿಕ ಆಚರಣೆಯನ್ನು ಅಪವಿತ್ರಗೊಳಿಸಿದೆ ಎಂದು ಡಾ. ರತಿ ದೂರಿದರು.

ಬೋಳೂರು ಜಾರಂದಾಯ ದೈವಸ್ಥಾನದಲ್ಲಿ ಈ ಹಿಂದೆ ಶ್ರೀ ಸುಬ್ಬಣ್ಣ ಪಂಬದ, ಭಾಸ್ಕರ ಪಂಬದ ಮತ್ತು ಮುಳ್ಳಿಯ ಕುಮಾರ ಪಂಬದರಂತಹ ದಿಗ್ಗಜರು ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು. ಆದರೆ ಈಗಿನ ಆಡಳಿತ ಸಮಿತಿಯು ದೈವನರ್ತಕರನ್ನು ಬದಲಾಯಿಸಿ ಗಣೇಶ್ ಪಂಬದ ಎಂಬುವವರಿಗೆ ಜವಾಬ್ದಾರಿ ನೀಡಿದ ಪರಿಣಾಮವಾಗಿ ಈ ಅನಾಚಾರ ಸಂಭವಿಸಿದೆ. ಇದು ಪಂಬದ ಸಮುದಾಯದ ಘನತೆಗೆ ಕುಂದು ತಂದಿದೆ ಎಂದು ಅವರು ಹೇಳಿದರು.

ಪ್ರಶ್ನಿಸಿದ ಮಹಿಳಾ ವಿದ್ವಾಂಸರಿಗೆ ಅಪಮಾನ: ಈ ಆಚರಣಾ ಲೋಪದ ಬಗ್ಗೆ ಪ್ರಶ್ನಿಸಲು ಹೋದಾಗ, ಗಣೇಶ್ ಪಂಬದ ಮತ್ತು ಆತನ ಅಳಿಯ ಸೂರಜ್ ಅವರು ಉಡಾಫೆಯ ಉತ್ತರ ನೀಡಿದ್ದಾರೆ. “ನಾವು ಯಾರನ್ನು ಬೇಕಾದರೂ ನೇಮ ಕಟ್ಟಿಸುತ್ತೇವೆ. ಹೆಂಗಸಾದ ನಿನಗೆ ನೇಮ ಕಟ್ಟಲು ತಾಕತ್ತಿದೆಯೇ?” ಎಂದು ಸ್ತ್ರೀತ್ವಕ್ಕೆ ಅಪಮಾನ ಮಾಡುವ ರೀತಿಯಲ್ಲಿ ನಿಂದಿಸಿದ್ದಾರೆ. ಈ ವರ್ತನೆಯು ದೈವಾರಾಧನೆಯ ಹೆಸರಿನಲ್ಲಿ ನಡೆಯುತ್ತಿರುವ ಅಹಂಕಾರದ ಪರಮಾವಧಿ ಎಂದು ಡಾ. ರತಿ ವಿಷಾದಿಸಿದರು.

ಇಂತಹ ಗಂಭೀರ ವಿಷಯವನ್ನು ದೈವಸ್ಥಾನದ ಸಮಿತಿ, ಗುತ್ತು ಮನೆತನದವರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ. ವಿಪರ್ಯಾಸವೆಂದರೆ, ಇಂತಹ ನೀಚ ಕೃತ್ಯವೆಸಗಿದ ವ್ಯಕ್ತಿಗೆ 2025-26ರ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಜಿಲ್ಲಾಡಳಿತದ ಆಯ್ಕೆ ಸಮಿತಿಯ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ತೀಕ್ಷ್ಣವಾಗಿ ಟೀಕಿಸಿದರು.

ಈಗ ಕೋಲ ಕಟ್ಟುವುದಾದರೆ ನಿನಗೆ ಕಾಂತಾರದ ರಿಷಬ್‌ ಶೆಟ್ಟಿ ತರ ಅಬ್ಬರಿಸಲು ಬರುತ್ತಾ ಎಂದು ನರ್ತಕರಲ್ಲಿ ಕೇಳುತ್ತಾರೆ. ಇದರಿಂದ ನರ್ತಕರು ದಿಗ್ಭ್ರಾಂತರಾಗಿದ್ದಾರೆ. ರಿಷಬ್‌ ಶೆಟ್ಟಿ ತರ ಅಬ್ಬರಿಸುವ ಕ್ರಮ ಇಲ್ಲ ಎಂದರೆ ನೀನು ನರ್ತನ ಸೇವೆ ಮಾಡಬಾರದು ಎಂದು ಕೆಲವರು ಕಳಿಸುವುದೂ ಇದೆ. ಹೀಗಾದರೆ ದೈವನರ್ತನದ ಮೂಲ ಪರಂಪರೆಗೆ ಅಪಚಾರ ಉಂಟಾಗುತ್ತದೆ ಎಂದು ಡಾ. ರವಿ ಕಳವಳ ವ್ಯಕ್ತಪಡಿಸಿದರು.

ನ್ಯಾಯಕ್ಕಾಗಿ ಮನವಿ:

ಈಗಾಗಲೇ ರಾಜ್ಯ ಮಹಿಳಾ ಆಯೋಗ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಲಾಗಿದ್ದು, ತುಳುನಾಡಿನ ದೈವಾರಾಧಕರು ಮತ್ತು ಸಾರ್ವಜನಿಕರು ಈ ವಿಷಯದಲ್ಲಿ ಜಾಗೃತರಾಗಬೇಕು. ದೈವಿಕ ಪರಂಪರೆಯನ್ನು ಉಳಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಮಾಜವು ಒಟ್ಟಾಗಿ ನಿಲ್ಲಬೇಕೆಂದು ಡಾ. ರತಿ ಅವರು ಈ ಪತ್ರಿಕಾಗೋಷ್ಠಿಯ ಮೂಲಕ ಪ್ರಾರ್ಥಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular