Sunday, January 25, 2026
Flats for sale
Homeಜಿಲ್ಲೆಮಂಗಳೂರು : ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ...

ಮಂಗಳೂರು : ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ : ಸಂಸದ ಕ್ಯಾ. ಚೌಟ

ಮಂಗಳೂರು : ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಾಡಿಸಿರುವುದನ್ನು ವಿರೋಧಿಸಿರುವುದು ನೋಡಿದರೆ ಕಾಂಗ್ರೆಸ್‌ನವರ ಹಿಂದೂ ವಿರೋಧಿ ಮಾನಸಿಕತೆ ಹಾಗೂ ತುಷ್ಟೀಕರಣ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮತೀಯ ಹಾಗೂ ಮೂಲಭೂತವಾದಿಗಳನ್ನು ಓಲೈಸುವುದಕ್ಕಾಗಿ ಹಿಂದೂ ಸಮಾಜವನ್ನು ಪದೇಪದೇ ಟಾರ್ಗೆಟ್‌ ಮಾಡುತ್ತಿದೆ. ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಕಡೆ ಪಾಕಿಸ್ತಾನದ ಧ್ವಜ ಹಾರಾಡಿಸಿದಾಗ ಈ ಕಾಂಗ್ರೆಸ್‌ನವರು ಎಲ್ಲಿ ಹೋಗಿದ್ದರು. ಈಗ ಉಡುಪಿ ಪರ್ಯಾಯದಲ್ಲಿ ಸಂಪ್ರದಾಯದಂತೆ ಭಗವಾಧ್ವಜ ಹಿಡಿದ ತಕ್ಷಣ ಬೊಬ್ಬೆ ಹೊಡೆಯುವ ಕಾಂಗ್ರೆಸ್‌ ನಾಯಕರ ಮನಸ್ಥಿತಿ ಏನು ಮತ್ತು ಹಿಂದೂಗಳ ಪಾವಿತ್ರ್ಯತೆ, ಗೌರವದ ಸಂಕೇತವಾದ ಭಗವಾಧ್ವಜದ ಬಗ್ಗೆ ಎಷ್ಟು ದ್ವೇಷವಿದೆ ಎನ್ನುವುದು ರಾಜ್ಯದ ಜನರಿಗೆ ಅರಿವಾಗಿದೆ ಎಂದು ಹೇಳಿದ್ದಾರೆ.

ಭಗವಧ್ವಜ ಶೌರ್ಯ, ಜ್ಞಾನ, ತ್ಯಾಗದ ಪ್ರತೀಕ; ಸೇವೆ, ಸಂಸ್ಕೃತಿ, ಭಕ್ತಿಯ ದ್ಯೋತಕ. ದೇವಸ್ಥಾನ, ಧಾರ್ಮಿಕ ಉತ್ಸವಗಳಲ್ಲಿ ಭಗವಾಧ್ವಜ ಹಾರಿಸುವುದು ನಮ್ಮ ಹಿಂದುಗಳ ಹಕ್ಕು. ಆದರೆ, ಶಾಲಾ ಮಕ್ಕಳ ಬಿಸಿಯೂಟಕ್ಕೆ ಕಲ್ಲು ಹಾಕಿ, ಬಡ ಮಕ್ಕಳ ಹೊಟ್ಟೆ ಚುರುಗುಟ್ಟುವಂತೆ ಮಾಡಿದ ಇತಿಹಾಸವಿರುವ ಹಾಗೂ ಎಸ್‌ಡಿಪಿಐನಂಥ ಮತೀಯ ಶಕ್ತಿಗಳ ಜತೆ ಮೈತ್ರಿ ಮಾಡಿಕೊಂಡಿರುವ ಮಾಜಿ ಸಚಿವ ರಮಾನಾಥ ರೈ ಅವರಿಗೆ ದೇವಸ್ಥಾನಗಳಲ್ಲಿನ ಧಾರ್ಮಿಕ ಆಚರಣೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ? ಉಡುಪಿ ಜಿಲ್ಲಾಧಿಕಾರಿಗಳೇ ತಾವೇನು ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟ ಬಳಿಕವೂ ಅದಕ್ಕೆ ಮತೀಯ ಬಣ್ಣ ಹಚ್ಚಿ ಸಮಾಜವನ್ನು ಒಡೆಯುವ ಕಾಂಗ್ರೆಸ್‌ಗರ ಅತ್ಯಂತ ಕೀಳುಮಟ್ಟದ ಓಲೈಕೆ ರಾಜಕಾರಣಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

ತುಷ್ಟೀಕರಣದ ರಾಜಕಾರಣ ಮಾಡುತ್ತಾ ಕಾಂಗ್ರೆಸ್ ಪಾರ್ಟಿಗೆ ಕೇಸರಿ ಕಂಡರೆ ಕಿಡಿಕಾರುತ್ತದೆ. ಮತೀಯ ಶಕ್ತಿಗಳನ್ನು ಓಲೈಸಲು ಕಾಂಗ್ರೆಸ್ ಹಿಂದೂ ಸಮಾಜವನ್ನು ಪದೇಪದೇ ಗುರಿ ಮಾಡುತ್ತಿದೆ . ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮತ್ತು ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸುವ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಬುದ್ಧಿ ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಕಟುವಾಗಿ ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular