ಮಂಗಳೂರು : ಅಕ್ರಮ ಮರಳು ಗಣಿಗಾರಿಕೆ ವಿರುದ್ಧಧ್ವನಿ ಎತ್ತಿದ ಹಿನ್ನೆಲೆ ನಗರದ ಹೊರವಲಯದ ಅಡ್ಯಾರ್ ಬಳಿ ಮರಳು ದಂಧೆಕೋರರ ಗುಂಪೊಂದು ಮಂಗಳೂರು ಪ್ರದೇಶ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಜೆರೋಮ್ ಡಿಸೋಜಾ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಗುರುಪುರ ನದಿಯಲ್ಲೂ ಕೂಡ ಅಕ್ರಮ ಮರಳುಗಾರಿಕೆ ನಡೆಯುತಿತ್ತು ಆದರೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಮಾಮೂಲಿ ಪಡೆಯುತ್ತಿದೆಂದು ಸ್ಥಳೀಯರು ಆರೋಪಿಸಿ ಆಕ್ರೋಶ ಹೊರಹಾಕಿದ್ದರು. ಪಾವೂರು ಉಳಿಯ ನೇತ್ರಾವತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಡಿಸೋಜಾ ಅವರ ಮೇಲೆ 10 ರಿಂದ 15 ಜನರ ಗುಂಪು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು ಅಲ್ವಿನ್ ಡಿಸೋಜಾ ಕೂಡ ಬೇರೆಡೆ ಮರಳುಗಣಿಗಾರಿಕೆ ಮಾಡುತ್ತಿದ್ದಾರೆಂದು ತಿಳಿದಿದೆ. ಅಲ್ಲಿ ನಡೆಯುವ ಮರಳು ದಂದೆಕೋರರು ಕೂಡ ಸಂಬಂಧಪಟ್ಟ ಪಕ್ಷದವರೆಂದು ಮಾಹಿತಿ ದೊರೆತಿದೆ. ತುಂಬೆ ಮತ್ತು ಮಾರಿಪಳ್ಳ ಬಳಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರ ಮೇಲೆ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ದಾಳಿಯ ವೇಳೆ ಮರಳು ತೆಗೆಯಲು ಬಳಸುತ್ತಿದ್ದ ಸುಮಾರು 20 ದೋಣಿಗಳನ್ನು ಜಪ್ತಿ ಮಾಡಿ ನಂತರ ಅಡ್ಯಾರ್ ಬಳಿ ನಿಲ್ಲಿಸಲಾಗಿತ್ತು.
ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ಕಾಂಗ್ರೆಸ್ ನಾಯಕ ಹಾಗೂ ಕ್ಯಾಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಡಿಸೋಜಾ ಅವರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಖಾದರ್ ಅವರು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣ ಮತ್ತು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.