ಮಂಗಳೂರು : ಬಜ್ಪೆ ಸಮೀಪದ ಕಾಳಾವರದಲ್ಲಿ ಯುವಕನೊಬ್ಬನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮೂವರನ್ನು ಭಾನುವಾರ ಸಂಜೆ ಬಂಧಿಸಿದ್ದಾರೆ. ಕಾಳಾವರದ ಪ್ರಶಾಂತ್ ಅಲಿಯಾಸ್ ಪಚ್ಚು (28), ಧನರಾಜ್ (23) ಮತ್ತು ಯಜ್ಞೇಶ್ (22) ಬಂಧಿತರು. ಪ್ರಕರಣದ ಇನ್ನೂ ಕೆಲವು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಗಸ್ಟ್ 31 ರಂದು ಕಾಳಾವರದಲ್ಲಿ ಗಲಾಟೆ ನಡೆದ ನಂತರ ರಿಯಾಜ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುರತ್ಕಲ್ ಪೊಲೀಸರಿಂದ ಸೆ.3ರಂದು ಕಾಳಾವರದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ಮಾತನಾಡಬೇಕು ಎಂದು ಆರೋಪಿಗಳು ಅಬ್ದುಲ್ ಸಫ್ವಾನ್ ಅವರನ್ನು ಕರೆಸಿದ್ದರು ಎಂದು ತಿಳಿದುಬಂದಿದೆ. ಅದರಂತೆ ಸಫ್ವಾನ್ ತನ್ನ ಸ್ನೇಹಿತ ಮೊಹಮ್ಮದ್ ಸಫ್ವಾನ್ ಜೊತೆಗೆ ಕಾಳಾವರದ ಬಸ್ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿ ಆರೋಪಿಗಳು ಅಬ್ದುಲ್ ಸಫ್ವಾನ್ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.


