Saturday, February 22, 2025
Flats for sale
Homeಜಿಲ್ಲೆಮಂಗಳೂರು : ಕರಾವಳಿಯ ದೈವರಾಧನೆಯನ್ನು ಶಾಲಾ ರಂಗೋತ್ಸವ ಕಾರ್ಯಕ್ರಮಕ್ಕೆ ಸೇರಿಸಿದ ರಾಜ್ಯ ಸರ್ಕಾರ,ಸುತ್ತೋಲೆಯನ್ನು ವಾಪಸ್ ಪಡೆಯದಿದ್ದರೆ...

ಮಂಗಳೂರು : ಕರಾವಳಿಯ ದೈವರಾಧನೆಯನ್ನು ಶಾಲಾ ರಂಗೋತ್ಸವ ಕಾರ್ಯಕ್ರಮಕ್ಕೆ ಸೇರಿಸಿದ ರಾಜ್ಯ ಸರ್ಕಾರ,ಸುತ್ತೋಲೆಯನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ದೈವರಾಧಕರು..!

ಮಂಗಳೂರು : ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದಂತಹ ಕರಾವಳಿಯ ದೈವರಾಧನೆಯನ್ನು ರಾಜ್ಯ ಸರ್ಕಾರ ಶಾಲಾ ರಂಗೋತ್ಸವ ಕಾರ್ಯಕ್ರಮದಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೈವಾರಾಧನೆ ಒಂದು ಪ್ರಕೃತಿ ಆರಾಧನಾ ಪದ್ಧತಿ , ಹರಿಯುವ ನದಿಯಿಂದ ತೆಗೆದ ಕಲ್ಲನ್ನು ಪೂಜಿಸಿದವರು ನಮ್ಮ ಈ ತುಳುವರು , ಇದನ್ನ ಬನಗಳ ನಡುವೆ ಇಟ್ಟು ಹರಿಯುವ ಝರಿಯ ನೀರನ್ನ ಉಪಯೋಗಿಸಿ ಕಾಡಿನಲ್ಲಿ ಸಿಗುವ ಹೂ ಇತ್ಯಾದಿಗಳನ್ನು ಬಳಸಿದವರು ಇವರು , ನಮ್ಮಲ್ಲಿ ದೈವಗಳಿಗೆ ಉಗಮ ಅಂತ್ಯ ಎಂಬ ಕಲ್ಪನೆಗಳು ಇದ್ದಿಲ್ಲ, ನಿರಾಕಾರವಾದ ಕಲ್ಲುಗಳಲ್ಲಿ ದೈವಗಳನ್ನು ನಂಬಿದವರು ಎಂಬುದು ಇತಿಹಾಸ. ದೈವಾರಾಧನೆಯು ಒಂದು ಪವಿತ್ರ ಆಚರಣೆಯಾಗಿದ್ದು, ಮನರಂಜನಾ ಕಾರ್ಯಕ್ರಮವಲ್ಲ ಎಂದು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೀಗ ಸರಕಾರದ ವಿರುದ್ಧ ತುಳುನಾಡಿನ ಜನರು ರೊಚ್ಚಿಗೆದ್ದಿದ್ದು ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲಾಗಿದೆ.

ತುಳು ನಾಡಿನ ದೈವಾ ರಾಧನೆಯು ಇಲ್ಲಿನ ಇತಿಹಾಸವನ್ನೂ ಸಾರುತ್ತವೆ. ದೈವಾರಾಧನೆಯ ಸಂದರ್ಭದಲ್ಲಿ ಹೇಳಲಾಗುವ ಸಂಧಿ, ಪಾಡ್ದನ, ನುಡಿಕಟ್ಟುಗಳಲ್ಲಿ ಸ್ಥಳೀಯ ಇತಿಹಾಸವೇ ಅಡಗಿರುತ್ತದೆ ಎಂದರೂ ತಪ್ಪಲ್ಲ. ಕೆಲವು ಊರಿನಲ್ಲಿ ಜನರು ಸಾಮೂಹಿಕವಾಗಿ ಆಚರಿಸುವ ಪದ್ಥತಿ ಕಟ್ಟುಪಾಡುಗಳಲ್ಲಿ ತಲೆತಲಾಂತರಗಳ ಹಿಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವ್ಯವಸ್ಥೆಗಳ ಕುರುಹುಗಳು ಗೋಚರವಾಗುತ್ತವೆ. ಬಾವುಕತನವನ್ನು ಬಿಟ್ಟು ಈ ಸುಳಿವಿನ ಮೂಲಕ ಸಾಗುತ್ತಾ ಹೋದರೆ ಸ್ಪಷ್ಟವಾಗಿ ಹಿಂದಿನ ಕಾಲದ ಸಾಮಾಜಿಕ ಚಿತ್ರಣ ನಮ್ಮ ಕಣ್ಣೆದುರು ನಿಲ್ಲುತ್ತದೆ.

ಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಬಂದ ಬಳಿಕ ಬೀದಿ ಬೀದಿಗಳಲ್ಲಿ ದೈವದ ವೇಷ ಭೂಷಣ ಹಾಕಿ ಅಣಕು ಪ್ರದರ್ಶನ ಮಾಡಲಾಗುತ್ತಿದೆ. ಇದರ ವಿರುದ್ದ ಕ್ರಮ ಕೈಗೊಳ್ಳಲು ದೈವರಾಧಕರು ಸರ್ಕಾರಕ್ಕೆ, ಆಡಳಿತ ವ್ಯವಸ್ಥೆಗೆ ಒತ್ತಾಯ ಮಾಡಿಕೊಂಡೆ ಬಂದಿದ್ದಾರೆ. ಆದರೆ ಇದೀಗ ಆಳುವ ಸರ್ಕಾರವೇ ದೈವರಾಧನೆಗೆ ಅಪಚಾರ ಎಸಗಿದೆ ಎಂದು ದೈವರಾಧಕರು ಆರೋಪಿಸಿದ್ದಾರೆ. ಮಕ್ಕಳಿಗೆ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅರಿವು ಮೂಡಿಸಲು ಶಾಲೆಗಳಲ್ಲಿ ರಂಗೋತ್ಸವ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಶಾಲೆಗಳಿಗೂ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಆದರೆ ಈ ಸುತ್ತೋಲೆಯಲ್ಲಿ ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಬೊಂಬೆಯಾಟ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ‌ ಜೊತೆ ದೈವಾರಾಧನೆ ಸೇರ್ಪಡೆ ಮಾಡಿರುವುದು ದೈವರಾಧಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಸ್ತ ತುಳುನಾಡಿನ ದೈವಭಕ್ತರ ನಂಬಿಕೆಗೆ ಧಕ್ಕೆಯಾಗಿದೆ. ಈ ಸುತ್ತೋಲೆಯನ್ನು ವಾಪಾಸು ಪಡೆಯುವಂತೆ ದೈವರಾಧಕರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ದೈವರಾಧಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಬಾರಿಯೂ ರಂಗೋತ್ಸವ ಕಾರ್ಯಕ್ರಮದಲ್ಲಿ ಇದೇ ರೀತಿ ಭೂತರಾಧನೆಯನ್ನು ಸೇರಿಸಲಾಗಿತ್ತು. ಬಳಿಕ ಮಾಜಿ ಸಚಿವ ಸುನೀಲ್ ಕುಮಾರ್ ಮನವಿ ಮೇರೆಗೆ ಕೈ ಬಿಡಲಾಗಿತ್ತು. ಈಗ ಮತ್ತೆ ಅದೇ ತಪ್ಪನ್ನು‌ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಶಿಕ್ಷಣ ಸಚಿವ ಮಧುಬಂಗಾರಪ್ಪ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ಈ ಸುತ್ತೋಲೆಗೆ ದೈವರಾಧಕರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ತುಳುನಾಡಿನ ಕಾರ್ಣಿಕದ ದೈವಗಳನ್ನು ಬೀದಿಗೆ ತಂದು ಸರಕಾರ ನಿಲ್ಲಿಸಿರುವುದು ಒಂದು ವಿಪರ್ಯಾಸವಾಗಿದೆ.

ಈ ಹಿಂದೆಯೇ ಹಲವು ಸುತ್ತೋಲೆಗಳನ್ನು ಹೊರಡಿಸಿ ಭೂತಾರಾಧನೆ ವಿಷಯದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದ್ದರೂ ಸರ್ಕಾರವೇ ಇಂತಹ ಆದೇಶ ಹೊರಡಿಸುತ್ತಾರೆಂದರೆ ಇದು ಉದ್ದೇಶಪೂರ್ವಕವಲ್ಲದೇ ? ತುಳುನಾಡಿನ ಆಚಾರ ವಿಚಾರಗಳಿಗೆ ಕಿಂಚಿತ್ತು ಧಕ್ಕೆಯಾದರೂ ನಾವು ಸಹಿಸುವುದಿಲ್ಲ. ನಾವು ಉಗ್ರ ಪ್ರತಿಭಟನೆ ನಡೆಸಿಯೇ ಸಿದ್ಧ ಎಂದವರು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಆದೇಶವನ್ನು ಹೊರಡಿಸಿರುವ ಸರಕಾರ ಮತ್ತು ಮಂತ್ರಿಗಳಿಗೆ ದೈವದ ಮೇಲೆ ಭಕ್ತಿ ಇದ್ದರೆ ಅವರು ಕೂಡಲೇ ಕ್ಷಮೆ ಯಾಚನೆ ಮಾಡಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular