ಮಂಗಳೂರು : ನಗರದ ಕಂಕನಾಡಿ ಯಿಂದ ಪಂಪವೆಲ್ ಸಂಪರ್ಕಿಸುವ ಮುಖ್ಯರಸ್ತೆ ಇದೀಗ ತೀರಾ ಹದಗೆಟ್ಟು ಸಂಚಾರಕ್ಕೆ ದೊಡ್ಡ ಅಡಚಣೆಯಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು ಹಾಗೂ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಸ್ತೆಯ ಹಾಳಾದ ಸ್ಥಿತಿಯಿಂದಾಗಿ ಅಪಘಾತದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರಿಗೆ ನೌಕರರ ದಿನನಿತ್ಯದ ಕೆಲಸವೇ ಜೀವದ ಹಂಗಿನಲ್ಲಿದೆ. ಪ್ರಯಾಣಿಕರ ಸುರಕ್ಷತೆ ನಮ್ಮ ಹೊಣೆಗಾರಿಕೆ ಆದರೂ, ರಸ್ತೆ ಪರಿಸ್ಥಿತಿ ನೌಕರರ ಕೈಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ, ಸಂಬಂಧಿತ ಅಧಿಕಾರಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ಎಲ್ಲರೂ ಒಟ್ಟಾಗಿ ಗಮನಹರಿಸಿ ಈ ರಸ್ತೆ ದುರಸ್ತಿ ತಕ್ಷಣ ಕೈಗೊಳ್ಳುವಂತೆ ಸಂಘ ಮನವಿ ಮಾಡಿದೆ.
“ಮಂಗಳೂರಿನ ಸಾರಿಗೆ ವ್ಯವಸ್ಥೆಯ ದೈನಂದಿನ ನಾಡಿಯೇ ಈ ರಸ್ತೆ. ಇದನ್ನು ನಿರ್ಲಕ್ಷಿಸುವುದಾದರೆ, ಅದು ನೇರವಾಗಿ ಜನಜೀವನವನ್ನು ನಿರ್ಲಕ್ಷಿಸುವಂತಾಗಿದೆ. ತ್ವರಿತ ಕ್ರಮ ಕೈಗೊಳ್ಳುವುದು ಎಲ್ಲರ ಜವಾಬ್ದಾರಿ” ಎಂದು ಸಂಘದ ಪ್ರಕಟಣೆ ತಿಳಿಸಿದೆ.


