ಮಂಗಳೂರು : ಎಳನೀರು ಕುಡಿದ ಬಳಿಕ ವಾಂತಿ ಮತ್ತು ಭೇದಿ ಆರಂಭವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಐಸ್‌ಕ್ರೀಂ ಘಟಕವೊಂದರಲ್ಲಿ ಎಳನೀರು ಬಾಟಲಿ ರೂಪದಲ್ಲಿ ಮಾರಾಟಮಾಡುತಿದ್ದು ಇತ್ತೀಚಿಗೆ ಎಳನೀರಿನ ದರ ಹೆಚ್ಚಾದ ಕಾರಣ ಬಿಸಿಲಿನ ಬೇಗೆಗೆ ತಂಪಾಗಿಸಲು ಹಲವಾರು ಗ್ರಾಹಕರು ಈ ಘಟಕದಿಂದ ಎಳನೀರನ್ನು ಖರೀದಿಮಾಡುತ್ತಾರೆ.

ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದ 12 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಹೊರರೋಗಿ ಘಟಕದಲ್ಲಿ ಚಿಕಿತ್ಸೆ ಪಡೆತ್ತಿದ್ದು ಇನ್ನು ಕೆಲವರು ಇನ್ನಿತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ದೂರಿನ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿ ಐಸ್‌ಕ್ರೀಂ ಘಟಕಕ್ಕೆ ಭೇಟಿ ನೀಡಿದ್ದು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ.ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳನ್ನೂ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.ಇದರ ಬೆನ್ನಲ್ಲೇ ಇಡೀ ಕಾರ್ಖಾನೆಯನ್ನು ಬಂದ್ ಮಾಡಿ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿದುಬಂದಿದೆ.


