ಮಂಗಳೂರು : ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಚರಲ್ ಫಾರಂ ಆಯೋಜಿಸುವ ‘ಸೌಹಾರ್ದ ಬ್ಯಾರಿ ಉತ್ಸವ – 2025’ ಸಂಘಟನಾ ಸಮಿತಿ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ‘ಬ್ಯಾರಿ ಸೌಹಾರ್ದ ಉತ್ಸವ’ವನ್ನು 2025 ರ ಎಪ್ರಿಲ್ 18, 19,20 ರಂದು ಆಯೋಜಿಸಲಾಗಿದೆ ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಸೂಚಿಯಾಗುವ ಹಾಗೂ ಬಹು ಭಾಷಾ ಸಂಸ್ಕೃತಿಗಳನ್ನು ಪ್ರಸ್ತುತಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನಿವೃತ್ತ ಡಿಸಿಪಿ, ಫಾರಂ ಅಧ್ಯಕ್ಷ ಜಿಎ ಬಾವಾ ತಿಳಿಸಿದ್ದಾರೆ .
ಅವರು ಶುಕ್ರವಾರ ಮಂಗಳೂರು ನಗರದ ಹೊಟೇಲ್ ವುಡ್ ಲ್ಯಾಂಡ್ ಹಾಲ್ ನಲ್ಲಿ ಬೆಳಿಗ್ಗೆ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎಪ್ರಿಲ್ 18 ರ ಶುಕ್ರವಾರ ಸಾಯಂಕಾಲ 4 ಗಂಟೆಗೆ ಉದ್ಘಾಟನೆಗೊಂಡು ಉತ್ಸವವು ದಿನಾಂಕ 20-4-2025 ರಂದು 7 ಗಂಟೆಗೆ ಸಮಾರೋಪಗೊಳ್ಳಲಿದೆ. ಈ ಮೂರು ದಿನಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ನಡೆಯಲಿದೆ ಎಂದರು.
ಏಪ್ರಿಲ್ 19 ರ ಬೆಳಿಗ್ಗೆ 10 ಗಂಟೆಯಿಂದ ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ, ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಒಂದೇ ಕಡೆ ದೇಶ ವಿದೇಶದ 100 ಕ್ಕಿಂತ ಹೆಚ್ಚು ಪ್ರಖ್ಯಾತ ಕಂಪೆನಿಗಳು ಇಲ್ಲಿ ಸೇರಲಿದ್ದು ಕರಾವಳಿ ಭಾಗ ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯಬಹುದು. ದುಬೈ, ಸೌದಿ ಅರೇಬಿಯಾ, ಕತಾರ್ ಸೇರಿಂದ ಮಿಡಲ್ ಈಸ್ಟ್ ನ ಕಂಪೆನಿಗಳು ಇಲ್ಲಿನ ಯುವಕ — ಯುವತಿಯರಿಗೆ ಉದ್ಯೋಗ ಅವಕಾಶ ಕೊಡಲು ಈ ಮೇಳದಲ್ಲಿ ಭಾಗವಹಿಸಲಿದೆ. 20 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ಈಗಾಗಲೇ ಕರಾವಳಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ ನ 100 ಕ್ಕಿಂತ ಹೆಚ್ಚು ಅನುಭವಿ ಕೌನ್ಸಿಲರ್ ಗಳು, ಮೆನ್ಟರ್ಸ್ ಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಒನ್ ಟು ವನ್ ಕೌನ್ಸಿಲಿಂಗ್ ಮಾಡಲಿದ್ದಾರೆ. ವಿಶೇಷವಾಗಿ 85 % ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರೋತ್ಸಾಹ ಸಿಗಲಿದೆ. ಅದೇ ದಿನ 20 ರಂದು ಉಚಿತ ವೈದ್ಯಕೀಯ ಶಿಬಿರ ತಪಾಸಣಾ ಶಿಬಿರ ನಡೆಯಲಿದ್ದು, ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಡಿಸೋಜಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ,ಅರುಣ್, ಉದ್ಯೋಗ ಮೇಳದ ಉಸ್ತುವಾರಿ,ಯುಟಿ ಫರ್ಝನಾ ಅಶ್ರಫ್, ಕೆಪಿಸಿಸಿ ವಕ್ತಾರೆ,ಮೂಸಬ್ಬ, ಮೀಫ್ ಅಧ್ಯಕ್ಷ,ಶಾಹುಲ್ ಹಮೀದ್ ಕೆ.ಕೆ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಷರೀಫ್ ಅಬ್ಬಾಸ್ ವಳಾಲು, ಸಂಘಟಕರು ಹಾಜರಿದ್ದರು.