ಮಂಗಳೂರು : ಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶಿಷ್ಟ ಸ್ಥಾನವಿದೆ. ದೈವಗಳ ಮೇಲೆ ತುಳುವರಿಗು ಅಷ್ಟೇ ನಂಬಿಕೆಯೂ ಇದೆ. ಇದರ ಜೊತೆ ಪ್ರೇತಾತ್ಮ, ಬ್ರಹ್ಮರಾಕ್ಷಸಗಳ ಇರುವಿಕೆಯ ಬಗ್ಗೆಯೂ ಸಾಕಷ್ಟು ನಂಬಿಕೆಗಳಿದೆ. ಆದರೆ ಇಲ್ಲಿ ಬುಧವಾರ ನಡುರಾತ್ರಿಯಲ್ಲಿ ಊರ ದೈವದಿಂದ ವಿಶೇಷ ಕಾರ್ಯವೊಂದು ನಡೆದಿದ್ದು ಅದು ಎಷ್ಟು ವಿಶೇಷ ಅಂದ್ರೆ ಅದಕ್ಕಾಗಿ ರಾತ್ರಿ 10 ಗಂಟೆಯ ಬಳಿಕ ಜನರು ದೈವದ ಸಾನಿದ್ಯ ಹೊರತು ಪಡಿಸಿದ್ರೆ ಮನೆಯಲ್ಲೇ ಇರಬೇಕು ಎಂಬ ಎಚ್ಚರಿಕೆ ನೀಡಲಾಗಿತ್ತು. 12 ಗಂಟೆಯಾಗುತ್ತಿದ್ದಂತೆ ಅಲ್ಲಿ ನಡೆದ ಆ ಕಾರ್ಯ ಮೈ ನವಿರೇಳಿಸುವಂತಹದಾದ ಕಾರ್ಯವೊಂದು ನಡೆದಿದೆ. ಊರಿನ ಜನರಿಗೆ ಕಾಡುತ್ತಿತ್ತು ಬ್ರಹ್ಮ ರಾಕ್ಷಸ ಕಾಟಕ್ಕೆ ಬೇಸತ್ತು ದೈವರಾಜ ಬಬ್ಬು ಸ್ವಾಮಿಯ ಮೊರೆ ಹೋಗಿದ್ದರು ಈ ಹಿನ್ನೆಲೆ ನಡುರಾತ್ರಿಯಲ್ಲಿ ಬ್ರಹ್ಮರಾಕ್ಷಸನ ಉಚ್ಚಾಟನೆ ನಡೆದಿದೆ.




ಮಂಗಳೂರು ನಗರದ ಕೊಟ್ಟಾರ ಬಳಿಯ ದೇರೆಬೈಲ್ ನ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಬ್ರಹ್ಮ ರಾಕ್ಷಸನಿಂದಲೇ ಈ ರೀತಿ ನಾನಾ ತೊಂದರೆಗಳು ಎದುರಾಗಿದ್ದವು ಅನ್ನೋದು ಜ್ಯೋತಿಷ್ಯರ ಮೂಲಕವೂ ಗ್ರಾಮಸ್ಥರಿಗೆ ಕಂಡು ಬಂದಿತ್ತು.ಇದರ ಜೊತೆ ಈ ಗ್ರಾಮದ ಆರಾಧ್ಯ ದೈವ ಆಗಿರೋ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಆರಂಭ ಮಾಡೋ ಮೊದಲು ದೈವಸ್ಥಾನದವರು ಪ್ರಶ್ನಾ ಚಿಂತನೆ ನಡೆಸಿದಾಗ ಅಲ್ಲೂ ಈ ಬ್ರಹ್ಮ ರಾಕ್ಷಸನ ತೊಂದರೆ ಇರೋದು ಬೆಳಕಿಗೆ ಬಂದಿದೆ.ಇಡೀ ಊರಿನವರು ಸೇರಿ ಈ ಬ್ರಹ್ಮರಾಕ್ಷಸನ ಉಚ್ಚಾಟನೆ ಮಾಡಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಅದರಂತೆ ನಿನ್ಮೆ ನಡುರಾತ್ರಿಯಲ್ಲಿ ಬ್ರಹ್ಮರಾಕ್ಷಸನ ಉಚ್ಚಾಟನೆ ನಡೆದಿದೆ.
ಊರಿಗೆ ಊರೇ ಸೇರಿ ಈ ಉಚ್ಚಾಟನೆ ನಡೆಸಬೇಕಾಗಿರೋದ್ರಿಂದ ಪ್ರತೀ ಮನೆಯವರು ಇದರಲ್ಲಿ ಭಾಗಿಯಾಗಬೇಕು. ಅದರಂತೆ ಪ್ರತಿ ಮನೆಯಿಂದ ರಕ್ತಬಲಿಗಾಗಿ ಒಂದು ಕೋಳಿ,ಒಂದು ಲಿಂಬೆಹಣ್ಣು, ಒಂದು ತೆಂಗಿನಕಾಯಿ,ಒಂದು ತೆಂಗಿನ ಗರಿಯ ದೀವಟಿಗೆಯನ್ನ ದೈವಸ್ಥಾನಕ್ಕೆ ನೀಡಬೇಕು.ರಾತ್ರಿ12 ಗಂಟೆಯಾಗುತ್ತಿದ್ದಂತೆ ದೈವರಾಜ ಬಬ್ಬುಸ್ವಾಮಿ ಹಾಗೂ ಗುಳಿಗ ದೈವದ ಪಾತ್ರಿಯ ದರ್ಶನ ಸೇವೆಯಾಗಿ ಬಳಿಕ ಆ ಪರಿಸರದಲ್ಲಿ ಇರೋ ಎಲ್ಲಾ ಪ್ರೇತಾತ್ಮ, ಬ್ರಹ್ಮರಾಕ್ಷಸನನ್ನು ದೈವರಾಜ ಬಬ್ಬುಸ್ವಾಮಿ ಆವಾಹನೆ ಮಾಡಿ ಗುಳಿಗ ದೈವದ ಮೂಲಕ ಕಳುಹಿಸಿ ನದಿ ತೀರದಲ್ಲಿ ಮೋಕ್ಷ ನೀಡಲಾಯಿತು.ಈ ವೇಳೆ ಕೇವಲ ಪುರುಷರು ಮಾತ್ರ ಭಾಗವಹಿಸಲಿದ್ದು,ಯಾರೊಬ್ಬರೂ ಆ ಪರಿಸರದಲ್ಲಿ ಓಡಾಡುವಂತಿಲ್ಲ. ಹೀಗಾಗಿ ಪೊಲೀಸರು ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯವರೆಗೆ ಆ ಪರಿಸರದ ಸಂಚಾರ ನಿಷೇಧ ಮಾಡಿದ್ದರು. ರಸ್ತೆಯಲ್ಲಿ ಯಾರೂ ಓಡಾಡದಂತೆ ಮೊದಲೇ ಎಲ್ಲರಿಗೂ ಸೂಚನೆ ನೀಡಲಾಗಿತ್ತು.ಈ ಉಚ್ಚಾಟನೆ ನೋಡುವವರು ರಾತ್ರಿ 10 ಗಂಟೆಯೊಳಗೆ ದೈವಸ್ಥಾನಕ್ಕೆ ಬಂದು ಸೇರಬೇಕೆಂದು ಆಡಳಿತ ಮಂಡಳಿ ಸೂಚಿಸಿತ್ತು ಪ್ರಜ್ವಲ್ (ದೈವದ ಪಾತ್ರಿ) ಯವರು ತಿಳಿಸಿದ್ದಾರೆ.
ಈ ಬಗ್ಗೆ ದೇವಸ್ಥಾನದ ಸಂಬಂಧಪಟ್ಟ ರಾಜೇಶ್ ಎಂಬವರು ಮಾತನಾಡಿದ್ದು ಬ್ರಹ್ಮ ರಾಕ್ಷಸನ ಉಚ್ಚಾಟನೆ ಪ್ರಕ್ರಿಯೆಗಳು ರಾತ್ರಿ 11 ಗಂಟೆಗೆ ಆರಂಭಗೊಂಡಿದ್ದು ಮುಂಜಾನೆಯವರೆಗೂ ಮುಂದುವರಿದಿತ್ತು ಎಂದು ಹೇಳಿದ್ದಾರೆ. ದೈವಸ್ಥಾನದಲ್ಲಿ ಉಚ್ಚಾಟನೆ ಮಾಡಿದ ಬಳಿಕ ಸುಮಾರು ಐದು ಕಿಲೋಮೀಟರ್ ದೂರ ಇರುವ ಕೂಳೂರಿನ ಫಲ್ಗುಣಿ ನದಿಯವರೆಗೂ ಗುಳಿಗ ದೈವ ಸೇರಿ ಕ್ಷೇತ್ರದವರು ನಡೆದುಕೊಂಡೇ ತೆರಳಿ ನದಿ ತೀರಕ್ಕೆ ಬಿಟ್ಟಿದ್ದಾರೆ.ಈ ಮೂಲಕ ಬ್ರಹ್ಮರಾಕ್ಷಸ ಈ ದೇರೆಬೈಲ್ ಗ್ರಾಮದಿಂದ ಹೊರಟು ಹೋಯಿತು ಅನ್ನೋ ನಂಬಿಕೆ ಮೂಡಿದೆ. ಒಟ್ಟಿನಲ್ಲಿ ಇಂತಹ ಅಪರೂಪದ ವಿಶಿಷ್ಟ ಸಂಪ್ರದಾಯಕ್ಕೆ ದೇರೆಬೈಲ್ ಗ್ರಾಮ ಸಾಕ್ಷಿಯಾಯಿತು ಅನ್ನೋದೆ ವಿಶೇಷವಾಗಿದೆ.ಒಟ್ಟಿನಲ್ಲಿ ತುಳುನಾಡಿನ ಜನರು ನಂಬಿಕೆಯಲ್ಲಿಯೇ ಬದುಕುತ್ತಿದ್ದಾರೆಂಬುದು ಮನವರಿಕೆಯಾಗಿದೆ.