ಮಂಗಳೂರು : ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುವ ಮಳೆಯಿಂದಾಗಿ ಅಲ್ಲಲ್ಲಿ ಮಳೆನೀರು ನುಗ್ಗಿ ಕೃತಕ ನೆರೆ ಹಾಗೂ ಭೂಕುಸಿತ ಉಂಟಾಗಿದೆ. ಮಂಗಳೂರಿನ ಹೊರವಲಯದಲ್ಲಿರುವ ಉಲಾಯಿಬೆಟ್ಟು ಬಳಿಯ ಪೆರ್ಮಂಕಿಯ ಕೈಗುರಿಯಲ್ಲಿ ಇತ್ತೀಚೆಗೆ ಕೆತ್ತಿಕಲ್ ಹೆದ್ದಾರಿಯಲ್ಲಿ ಸಂಭವಿಸಿದಂತೆಯೇ ಬೃಹತ್ ಭೂಕುಸಿತ ಸಂಭವಿಸಿದ್ದು ಉಲಾಯಿಬೆಟ್ಟು,ಕೈಗುರಿ,ಅಂಗಡಿ ಪಡ್ಪು ಹರಿಜನ ಕಾಲೋನಿ ಹಾಗೂ ಪೆರ್ಮೈ ಚರ್ಚ್‌ಗೆ ಸಂಪರ್ಕಿಸುವ ಟಾರ್ ರಸ್ತೆ ಸಂಪೂರ್ಣವಾಗಿ ಕುಸಿದಿದೆ. ಈ ಪ್ರದೇಶದ ನಿವಾಸಿಗಳು ಮಂಗಳೂರಿಗೆ ತಲುಪಲು ಮಲ್ಲೂರು ಮೂಲಕ ದೀರ್ಘ ಮಾರ್ಗವನ್ನು ತೆಗೆದುಕೊಳ್ಳಬೇಕಾಗುತ್ತದೆಂದು ಸ್ಥಳೀಯ ನಿವಾಸಿ ಕಿಶೋರ್ ಶೆಟ್ಟಿ ಯವರು ತಿಳಿಸಿದ್ದಾರೆ.
ರಸ್ತೆಯ ಸುಮಾರು ನಾಲ್ಕು ಅಡಿಗಳಷ್ಟು ಭಾಗ ಕುಸಿದಿದ್ದು, ಒಂದು ಕಿಲೋಮೀಟರ್ ಉದ್ದದ ಮಣ್ಣು ಕುಸಿದು ಮನೆಗಳು ಮತ್ತು ತೋಟಗಳಿಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ಹಾನಿಗೊಳಗಾಗಿದ್ದು, ಮಣ್ಣಿನ ಭಾರಕ್ಕೆ ಕೆಲವು ಬಾಗಿವೆ. ಭಾನುವಾರ ಪ್ರಾರಂಭವಾದ ಭೂಕುಸಿತವು ಸೋಮವಾರ ಹದಗೆಟ್ಟಿದ್ದು, ಹತ್ತಿರದ ಕೃಷಿ ಭೂಮಿಗೆ ಮತ್ತಷ್ಟು ಹಾನಿಯಾಗಿದೆ. ಎಂದು ಸ್ಥಳೀಯರು ತಿಳಿಸಿದ್ದಾರೆ.


ಪೆರ್ಮಂಕಿ ಪದವಿನಿಂದ ಪಾಲಿಕಟ್ಟೆ ಹಾಗೂ ಮಲ್ಲೂರು ಉದ್ದಬೆಟ್ಟುವಿಗೆ ಹೋಗುವ ರಸ್ತೆ ಭೂಕುಸಿತದಿಂದ ಕುಸಿದು ಹೋಗಿದೆ. ಇದರಿಂದ ನೂರಾರು ಮನೆಗಳಿಗೆ ಸಂಚಾರಕ್ಕೆ ಅಡಚಣೆಯಾಗಿದ್ದು, ಪರ್ಯಾಯ ರಸ್ತೆ ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಪರ್ಮಂಕಿ ಕೈಗುರಿಯಲ್ಲಿ ಕೈಗುರಿ ನಿವಾಸಿ ಯೆಹುಜೆ ಎಂಬವರ ಮನೆ ಬಿರುಕು ಬಿಟ್ಟಿದ್ದು, ಅದರಲ್ಲಿ ವಾಸ ಮಾಡಲು ಸಾಧ್ಯವೇ ಇಲ್ಲದಂತಾಗಿದೆ. ಇದರಿಂದ ಈ ಮನೆಯಲ್ಲಿದ್ದವರು ವಾಮಂಜೂರಿ ನಲ್ಲಿರುವ ಸಂಬಂದಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ರಾತ್ರಿ 9 ಗಂಟೆಯ ವೇಳೆಗೆ ಭಾರಿ ಸದ್ದು ಕೇಳಿದ್ದು, ಕೆಲವೇ ಕ್ಷಣಗಳಲ್ಲಿ ಭಾರಿ ಮಳೆ ಸುರಿದಿದೆ. ದುರ್ಘಟನೆಯಿಂದ ಭೂಮಿ 4 ಅಡಿಯಷ್ಟು ಕುಸಿದಿದೆ. ಕೆಲವೊಂದು ಮನೆ, ತಡೆಗೋಡೆಗಳು ಬಿರುಕು ಬಿಟ್ಟಿವೆ. ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರಿಹಾರ ಕಾರ್ಯಾಚರಣೆ ಬಗ್ಗೆ ಹೇಳಿಲ್ಲ ಎಂದು ಸ್ಥಳೀಯ ನಿವಾಸಿ ಸೆಲಿನಾ ಡಿಸೋಜ, ಕೈಗುರಿ ತಿಳಿಸಿದ್ದಾರೆ.
ಈ ಪ್ರದೇಶ ಭೌಗೋಳಿಕವಾಗಿ ಎತ್ತರ ಪ್ರದೇಶವಾಗಿದ್ದು, ಇಲ್ಲಿಂದ ಕೆಳಮುಖವಾಗಿ ಕೈಗುರಿಯತ್ತ ತೋಡು, ತೊರೆಗಳು ಹರಿಯುತ್ತಿವೆ. ಇದರಿಂದ ಕಿರು ಜಲಪಾ ತಗಳು ಸೃಷ್ಟಿಯಾಗಿದ್ದು, ಭೂಕುಸಿತದಿಂದ ಈ ಜಲಪಾ ತಗಳು, ತೊರೆಗಳು ಪಥ ಬದಲಿಸಿದ ಚಲಿಸುತ್ತಿವೆ. ಪರಂಬೋಕು ತೋಡಿನಲ್ಲಿ ಭಾರಿ ಗಾತ್ರದ ನೀರು ಹರಿಯುತ್ತಿದ್ದು, ಭೂಕುಸಿತದಿಂದ ಇದರ ಮೇಲೆ ಮಣ್ಣು ಬಿದ್ದು ತೋಡು ನಾಪತ್ತೆಯಾಗಿದ್ದು ಇದರಿಂದ ಹೆಚ್ಚು ಪ್ರಮಾಣದ ನೀರು ಕೆಳಭಾಗಕ್ಕೆ ಹರಿದು ಹೋಗಿತ್ತದೆಂದು ಸ್ಥಳೀಯರು ತಿಳಿಸಿದ್ದಾರೆ.