Friday, February 21, 2025
Flats for sale
Homeಜಿಲ್ಲೆಮಂಗಳೂರು : ಉಡುಪಿ-ಕಾಸರಗೋಡು 400KV ಮತ್ತು ಪಾಲಡ್ಕ-ಕಡಂದಲೆ 400/200 KV ವಿದ್ಯುತ್ ಪ್ರಸರಣ ಮಾರ್ಗಕ್ಕೆ ವ್ಯಾಪಕ...

ಮಂಗಳೂರು : ಉಡುಪಿ-ಕಾಸರಗೋಡು 400KV ಮತ್ತು ಪಾಲಡ್ಕ-ಕಡಂದಲೆ 400/200 KV ವಿದ್ಯುತ್ ಪ್ರಸರಣ ಮಾರ್ಗಕ್ಕೆ ವ್ಯಾಪಕ ವಿರೋಧ,ಪ್ರಾಣ ಕೊಟ್ಟೇವು -ಕೃಷಿ ಭೂಮಿ ಕೊಡುವುದಿಲ್ಲ – ಆಲ್ವಿನ್ ಡಿಸೋಜ ಪಾನೀರ್..!

ಮಂಗಳೂರು : ಪರಿಸರದ ಜೊತೆಗೆ ಮಾನವ ಸಹಿತ ಇಡೀ ಜೀವಸಂಕುಲಕ್ಕೆ ಮಾರಕವಾಗಿರುವ ಉಡುಪಿ ಕಾಸರಗೋಡು 400kv ಮತ್ತು ಪಾಲಡ್ಕ-ಕಡಂದಲೆ 400/220 KV ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ, ಈ ವಿಚಾರದಲ್ಲಿ ಪ್ರಾಣ ಕೊಡಲು ಸಿದ್ಧರಿದ್ದೇವೆಯೇ ಹೊರತು ಕೃಷಿ ಭೂಮಿ ಬಿಡಲು ಸಾಧ್ಯವಿಲ್ಲ ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜಾ ಪಾನೀರ್ ಬಹಿರಂಗವಾಗಿ ಎಚ್ಚರಿಸಿದ್ದಾರೆ.

ಉಡುಪಿ-ಕಾಸರಗೋಡು 400 KV ಮತ್ತು ಪಾಲಡ್ಕ-ಕಡಂದಲೆ 400/220 KV ವಿದ್ಯುತ್ ಲೈನ್ ಯೋಜನೆ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿಯೆನಿಸಿಕೊಂಡಿರುವ UKTL-ಸ್ಟೆರ್ ಲೈಟ್ ಪವರ್ (Sterlite Power) ಕಂಪನಿಯವರು ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅನುಷ್ಠಾನ ಗೊಳಿಸುತ್ತಿರುವ ವಿನಾಶಕಾರೀ ಯೋಜನೆಯ ಪ್ರಸ್ತಾವಿತ ಮಾರ್ಗವನ್ನು ಬದಲಾವಣೆ ಮಾಡಿ ಅನುಷ್ಠಾನಗೊಳಿಸುವರೇ ಒತ್ತಾಯಿಸಿ ಇಂದು ಫೆಬ್ರವರಿ 20ರಂದು ಗುರುವಾರ ಮಂಗಳೂರಿನಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.), ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.), ಉಡುಪಿ ಹಾಗೂ ಕಾಸರಗೋಡು 400 KV ಮತ್ತು ಪಾಲಡ್ಕ-ಕಡಂದಲೆ 400/220 KV ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ, ಉಡುಪಿ, ದಕ್ಷಿಣ ಕನ್ನಡ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ “ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾತ್ಮಕ ಮಾರ್ಗಸೂಚಿಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದ್ದು, ಈ‌ ದಿನದ ಪ್ರತಿಭಟನೆ ಇಡೀ ಯೋಜನೆಗೆ ಎಚ್ಚರಿಕೆಯ ಗಂಟೆ ಎಂದರು. ಕಥೊಲಿಕ್ ಸಭಾ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಇವರು ಹಸಿರು ಬಾವುಟ ಹಸ್ತಾಂತರಿಸುವ ಮೂಲಕ ಪ್ರತಿಭಟನಾ ಜಾಥಾಕ್ಕೆ ಚಾಲನೆ‌ ನೀಡಿದರು. ಬಳಿಕ ಮಾತನಾಡಿ, ಪರಿಸರಕ್ಕೆ ಮಾರಕವಾಗುವ ಯೋಜನೆಯನ್ನು ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಕೈಬಿಡಬೇಕೆಂದು ಒತ್ತಾಯಿಸಿದರು.

ಕೇಂದ್ರೀಯ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ ಪ್ರಾಸ್ತಾವಿಕವಾಗಿ ಮಾತನಾಡಿ, ಅಪಾಯಕಾರಿ ಯೋಜನೆಯ ಕಾಮಗಾರಿಯಲ್ಲಿಯೂ ಸ್ಪಷ್ಟ ಕಾನೂನಾತ್ಮಕ ಮಾನದಂಡಗಳನ್ನು ಗಾಳಿಗೆ ತೂರಿ ದಬ್ಬಾಳಿಕೆ, ಬಲಾತ್ಕಾರ ತಂತ್ರಗಳ ಮೂಲಕ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತಾವಿತ ಯೋಜನೆಗಳ ಬಗ್ಗೆ ಪ್ರಾಥಮಿಕ ಮಾಹಿತಿಗಾಗಿ ಯಾವುದೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನೇ ನಡೆಸದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಮದರ್ ತೆರೇಜಾ ವಿಚಾರ ವೇದಿಕೆಯ ರೋಯ್ ಕ್ಯಾಸ್ತಲಿನೊ ಮಾತನಾಡಿ, ಫಲವತ್ತಾದ ಕೃಷಿ ಭೂಮಿ, ಸಮೃದ್ಧ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು, ಬೃಹತ್ ಗಾತ್ರದ ವಿವಿಧ ಅಪರೂಪದ ಜಾತಿಯ ಮರಗಳನ್ನೊಳಗೊಂಡ ಸಂರಕ್ಷಿತ ಅರಣ್ಯ ಸಂಪತ್ತನ್ನು ಸರ್ವನಾಶಗೊಳಿಸುವ ಈ ಯೋಜನಾ ಮಾರ್ಗಕ್ಕೆ ನಮ್ಮೆಲ್ಲರ ತೀವ್ರ ವಿರೋಧವಿದೆ ಎಂದರು.

ಉಡುಪಿ – ಕಾಸರಗೋಡು 400ಕೆವಿ ಹೋರಾಟ ಸಮಿತಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಮಾತನಾಡಿ, ಈ ಯೋಜನೆಯನ್ನು ಪರ್ಯಾಯ ಮಾರ್ಗಗಳಾದ ಸಮುದ್ರ ಮಾರ್ಗ, ಹೆದ್ದಾರಿ, ಸಾರ್ವಜನಿಕ ರಸ್ತೆ ಅಥವಾ ರೈಲ್ವೆ ಹಳಿ ಪಕ್ಕ, ಇಲ್ಲವೇ ಭೂಗತ ಮಾರ್ಗದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ನಮ್ಮೆಲ್ಲರ ಹಕ್ಕೋತ್ತಾಯ, ಪ್ರತಿಭಟನೆ, ಕಾನೂನು ಹೋರಾಟ ಕಳೆದ 5 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದ್ದರೂ ಸ್ಪಂದನೆ ನೀಡದಿರುವುದು ದುರಂತ ಎಂದರು. 400/220 KV ಪಾಲಡ್ಕ-ಕಡಂದಲೆ ಪ್ರಸರಣ ಮಾರ್ಗದ ಸಂತ್ರಸ್ತರಾದ ವಿಕ್ಟರ್ ಕಡಂದಲೆ ಮಾತನಾಡಿ, ಸಂತ್ರಸ್ತರ ಜೊತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಧ್ವನಿಯಾಗಬೇಕು ಎಂದು ಆಗ್ರಹಿಸಿದರು.

ರೈತ ಸಂಘ – ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಮಾತನಾಡಿ, ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರುಗಳಿಗೆ ಯಾವುದೇ ಕಾನೂನು ಮಾನ್ಯತಾ ನೋಟಿಸು, ತಿಳುವಳಿಕೆ ಪತ್ರಗಳನ್ನು ನೀಡದೆಯೇ, ಭೂಮಾಲಕರುಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ, ಭೂಮಾಲಕರು, ಸಾರ್ವಜನಿಕರು ಮತ್ತು ಯೋಜನಾ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ತೀವ್ರ ವಿರೋಧವನ್ನು ದಿಕ್ಕರಿಸಿ, ಸೌಜನ್ಯ ಮೀರಿ ದಬ್ಬಾಳಿಕೆ ಹಾಗೂ ಅಮಾನವೀಯ ವರ್ತನೆ ಮೂಲಕ ಕಾಮಗಾರಿ ನಡೆಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಕುಡುಪು, NITK ನಿವೃತ್ತ ಪ್ರೊಫೆಸರ್, ನೈಸರ್ಗಿಕ ಕೃಷಿಕರು ಪರಿಸರ – ಸಂಗಮದ ಸಕ್ರೀಯ ಹಿರಿಯ ಕಾರ್ಯಕರ್ತರಾದ ಕುಮಾರ್ ರೈ, ಉಡುಪಿ ಜಿಲ್ಲಾ ಕೃಷಿಕರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶರ್ಮ ಮೊದಲಾದವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ – ಆಲ್ವಿನ್ ಡಿಸೋಜ ಪಾನೀರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ ವಂದಿಸಿದರು. ಹೋರಾಟ ಸಮಿತಿ ಸದಸ್ಯರಾದ ವಿಕ್ಟರ್ ಕಡಂದಲೆ, ಚಂದ್ರಹಾಸ ಶೆಟ್ಟಿ , ಕೃಷ್ಣ ಪ್ರಸಾದ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

ಹರಿದು ಬಂದ ಜನಸಾಗರ
ಉಡುಪಿ – ಕಾಸರಗೋಡು ಮತ್ತು ಪಾಲಡ್ಕ-ಕಡಂದಲೆ ಹೈಟೆನ್ಷನ್ ವಿದ್ಯುತ್‌ ಲೈನ್‌ ಯೋಜನೆ ವಿರುದ್ದ ನಡೆದ ಪ್ರತಿಭಟನೆಗೆ ಜನಸಾಗರವೇ ಹರಿದುಬಂದಿತ್ತು. ಆರಂಭದಲ್ಲಿ ಮಂಗಳೂರಿನ ಬಲ್ಮಠದಿಂದ ಮಿನಿ ವಿಧಾನ ಸೌಧದವರೆಗೆ “ಹಕ್ಕೋತ್ತಾಯ ಜಾಥಾ” ನಡೆದು ಬಳಿಕ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ “ಬೃಹತ್ ಪ್ರತಿಭಟನಾ ಸಭೆ” ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಯೋಜನಾ ಸಂತ್ರಸ್ತರು, ಕೃಷಿಕರು ಹಾಗೂ ರೈತ ಪರ, ಪರಿಸರಪರ ಕಾಳಜಿ ಉಳ್ಳ ಸಮಾನ ಮನಸ್ಕ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಈ ಪ್ರಕೃತಿ ವಿರೋಧಿ ಯೋಜನೆಯಿಂದಾಗಲಿರುವ ಜ್ವಲಂತ ಸಮಸ್ಯೆಗಳು.
ಈ ಯೋಜನೆ ಜಾರಿಯಾದಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುಣಚದ ವರೆಗಿನ 27 ಗ್ರಾಮಗಳ ಮತ್ತು ಕಾಸರಗೋಡು ಜಿಲ್ಲೆಯವರೆಗಿನ 115 ಕಿ.ಮೀ. ಉದ್ದ ಮತ್ತು 46 ಮೀಟರ್ ಅಗಲದ ಪ್ರಸ್ತಾವಿತ ಯೋಜನಾ ಮಾರ್ಗಕ್ಕಾಗಿ ನೇರವಾಗಿ 1150 ಎಕರೆ ಸಮೃದ್ಧ ಕೃಷಿ ಭೂಮಿ ಜೊತೆಗೆ ಈ ಲೈನ್ ಇಕ್ಕೆಲಗಳಲ್ಲಿ ಯಾವುದೇ ಮನೆ, ಕೊಟ್ಟಿಗೆ, ಗೋಡೌನ್, ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಿಕೊಳ್ಳಲು ಕೂಡಾ ಅವಕಾಶವಾಗದೆ, ಸುಮಾರು 2300 ಎಕರೆ ಜಮೀನು ಸೇರಿ ಒಟ್ಟು 3450 ಕ್ಕಿಂತ ಹೆಚ್ಚು ಜಮೀನು ಈ ಯೋಜನೆಗೆ ಸರ್ವನಾಶವಾಗಲಿದೆ. ಯೋಜನಾ ವ್ಯಾಪ್ತಿಯ ಸುಮಾರು 2.65 ಲಕ್ಷದಷ್ಟು ಅಡಿಕೆ ಮರ ಗಳನ್ನು ಬುಡ ಸಮೇತ ಕಡಿದು ಹಾಕಲಾಗುತ್ತದೆ. ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ತೆಂಗಿನ ಮರಗಳ ಮಾರಣ ಹೋಮವಾಗಲಿದೆ. ಸುಮಾರು 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿಗಳು ನಾಶವಾಗಲಿದೆ.

ಸುಮಾರು 1.5 ಲಕ್ಷ ರಬ್ಬರ್ ಮರಗಳು ನೆಲಸಮವಾಗಲಿವೆ. ಸುಮಾರು 25 ಸಾವಿರ ಹಲಸಿನ ಮರ, 28 ಸಾವಿರ ಮಾವಿನ ಮರ 2.5 ಲಕ್ಷಕ್ಕಿಂತ ಹೆಚ್ಚು ಬೃಹತ್ ಗಾತ್ರದ ವಿವಿಧ ಜಾತಿಯ ಕಾಡು ಮರಗಳು ಮತ್ತು ಔಷಧೀಯ ಗುಣವುಳ್ಳ ಸಹಸ್ರಾರು ವೈವಿದ್ಯಮಯ ಅರಣ್ಯ ಸಂಪತ್ತು ನಿರ್ನಾಮವಾಗಲಿದೆ. ಲಕ್ಷಾಂತರ ಸಂಖ್ಯೆಯ ಬಾಳೆ, ಪೇರಳೆ, ಸಪೋಟ ಮುಂತಾದ ತೋಟಗಾರಿಕಾ ಬೆಳೆ ತೋಟಗಳು ಸರ್ವ ನಾಶವಾಗಲಿದೆ. ಬಹುಮುಖ್ಯವಾಗಿ 328 ವಾಸ್ತವ್ಯದ ಮನೆಗಳು, 26 ದೈವಸ್ಥಾನ, 16 ದೇವಸ್ಥಾನ, 8 ಮಸೀದಿ, 14 ಶಾಲೆಗಳು, ಮತ್ತು 13 ಕ್ರೈಸ್ತ ಧರ್ಮದ ಇಗರ್ಜಿ-ಪ್ರಾರ್ಥನಾ ಮಂದಿರಗಳು ಈ ಯೋಜನಾ ಮಾರ್ಗಕ್ಕಾಗಿ ಬಲಿಯಾಗಲಿವೆ. ಇವೆಲ್ಲದರ ಜೊತೆಗೆ ಈ ಪ್ರಾಕೃತಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿರುವ ಕೋಟ್ಯಂತರ ಪಶು-ಪಕ್ಷಿಗಳು, ಜಲಚರ ಜೀವಿಗಳು, ಜೀವ ವೈವಿದ್ಯ ಸಂಕುಲಗಳನ್ನೆಲ್ಲಾ ಸರ್ವ ನಾಶಗೊಳಿಸಲಿದೆ. ಈ ಯೋಜನೆಯಿಂದ ಹರಿದಾಡಲಿರುವ ಬೃಹತ್ ಪ್ರಮಾಣದ ವಿದ್ಯುತ್ಶಕ್ತಿಯಿಂದ ಸೃಷ್ಟಿಯಾಗಲಿರುವ ವಿಕಿರಣ, ವಿದ್ಯುತ್ ಕಾಂತೀಯ ಅಲೆಗಳಿಂದ ಜನ, ಜಾನುವಾರುಗಳ ಆರೋಗ್ಯದ ಮೇಲಾಗಲಿರುವ ಕ್ಯಾನ್ಸರ್, ಬಂಜೆತನ ಮುಂತಾದ ಹಲವಾರು ಮಾರಣಾಂತಿಕಾ ಕಾಯಿಲೆಗಳಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಹೆಚ್ಚು ಈ ಬಗ್ಗೆ ಜಾಥಾದಲ್ಲಿ ಆಡಳಿತ ವ್ಯವಸ್ಥೆಯ ಗಮನ ಸೆಳೆಯಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular