ಮಂಗಳೂರು : ಮಂಗಳೂರು – ಸೋಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶ ಕುಸಿಯುವ ಭೀತಿ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ವಾಮಂಜೂರು ಆಸುಪಾಸಿನ ಕೆತ್ತಿಕಲ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಗುಡ್ಡ ಕುಸಿತದ ಪರಿಣಾಮ 390 ಕ್ಕೂ ಜನ ಮೃತಪಟ್ಟಿದ್ದಾರೆ. ಇನ್ನೂ ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಇಂಥ ಭಯಾನಕ ಸನ್ನಿವೇಶದಲ್ಲಿ ಇದೀಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯೂ ಅಂಥದ್ದೇ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಈ ಬಗ್ಗೆ ಗುಡ್ಡ ಅಗೆಯುವ ಸಂದರ್ಭ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಆ ಬಗ್ಗೆ ಅಧಿಕಾರಿಗಳು ಮೌನವಹಿಸಿದ್ದರು. ಇದೀಗ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಡ್ಡದ ಸಮೀಪದಲ್ಲೇ ಇರುವ ಮನೆಗಳಿಗೆ ನೋಟಿಸ್ ನೀಡಲಾಗಿದೆ. ಅಪಾಯಕಾರಿ ಸ್ಥಳದಲ್ಲಿನ 12 ಮನೆಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಜನ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಧಿಕಾರಿಗಳ ವಿರುದ್ದ ಕೆತ್ತಿಕಲ್ ಗುಡ್ಡದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಖಾಲಿ ಮಾಡಿ ಹೋಗಿ ಎಂದರೆ ನಾವೆಲ್ಲಿಗೆ ಹೊಗುವುದು? ಗುಡ್ಡ ಅಗೆಯುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿತ್ತೇ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕೆತ್ತಿಕಲ್ನಲ್ಲಿ ಗುಡ್ಡ ಕುಸಿದು ಭಾರೀ ಭಯದ ವಾತಾವರಣ ಇದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯ ಹೆಸರಿನಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ಗಣಿಗಾರಿಕೆ ಮಾಡಿ ಅವ್ಯಾಹತವಾಗಿ ಮಣ್ಣು ಸಾಗಿಸಲಾಗುತ್ತಿದೆ. ಗುಡ್ಡ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ಹಾಗೂ ಈ ಸ್ಥಳಕ್ಕೆ ಭೇಟಿ ನೀಡಲು ತಂತ್ರಜ್ಞರ ಸಮಿತಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ . ಹಲವು ವರ್ಷಗಳಿಂದ ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ ಜನ ನೆಲೆಸಿದ್ದು ಕಾಮಗಾರಿಗಾರಿಗಾಗಿ ಗುಡ್ಡವನ್ನು ಅಗೆದಿರುವುದರಿಂದ ಅವರೆಲ್ಲರಿಗೆ ಸಮಸ್ಯೆ ಎದುರಾಗಿದೆ ಒಟ್ಟಿನಲ್ಲಿ2-3 ತಿಂಗಳಿನಿಂದ ಹೊಸ ಮನೆ ಕರೀದಿಸಿದವರು ಮನೆಮಠಗಳನ್ನು ಬಿಟ್ಟುಹೋಗುವಂತಾಗಿದೆ.