ಬೆಳ್ತಂಗಡಿ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗುವಿನ ಸಾವು ಸಂಭವಿಸಿದ್ದು, ವೈದ್ಯಕೀಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರಲ್ಲಿ ಬೇಸರ ಮೂಡಿಸಿದೆ. ವೈದ್ಯರ ಅನುಪಸ್ಥಿತಿಯಲ್ಲಿ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಧರ್ಮಸ್ಥಳದ ಮುಳಿಕಾರ್ನ ಬಾಲಕೃಷ್ಣ ಮತ್ತು ಸವಿತಾ ದಂಪತಿ ತಮ್ಮ ಹೆಣ್ಣು ಮಗುವಿಗೆ ಕಫ ಸಂಬಂಧಿ ಸಮಸ್ಯೆ ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ವೇಳೆ ನರ್ಸ್ ಕೆಲವು ಇಂಜೆಕ್ಷನ್ ನೀಡಿದ್ದರಿಂದ ಮಗು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಮಗುವಿನ ಪೋಷಕರಿಗೆ ದೂರು ನೀಡುವಂತೆ ಸೂಚಿಸಿದರು.


