ಬೆಳಗಾವಿ : ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 38 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಸೇರಿ 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತ ಹಲವಾರು ವೇತನ ಹಿಂಬಾಕಿಗಳು ಉಳಿದಿವೆ ಎಂದು ಸರ್ಕಾರ ಒಪ್ಪಿಕೊಂಡಿದೆ.
ಡಾ.ಸಿ.ಎನ್.ಅಶ್ವತ್ಥನಾರಾಯಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ೨೦೨೩ರ ಡಿಸೆಂಬರ್ ಅಂತ್ಯದವರೆಗೆ 4099.38 ಕೋಟಿ ಹಾಗೂ 2024 ರ ಏಪ್ರಿಲ್ 1 ರಿಂದ ನವೆಂಬರ್ ಅಂತ್ಯದವರೆಗಿನ ಬಾಕಿ ಪ್ರಮಾಣ 2368.96 ಕೋಟಿ ರೂಪಾಯಿಗಳು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ೧೭೮೧.೮೮ ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಿಗೆ 2178.೯೫ ಕೋಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ 1687.51 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ 820 ಕೋಟಿ ಬಾಕಿ ಉಳಿದಿರುವ ವಿವರಗಳು ಸಚಿವರ ಮಾತಿನಿಂದ ದೊರಕಿದವು.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಹಿಂಬಾಕಿಗಳನ್ನು ನೀಡದೇ ಇದ್ದರೆ ಜನವರಿ 1 ರಿಂದ ಮುಷ್ಕರ ಮಾಡುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೇಗೆ ಇಷ್ಟು ದೊಡ್ಡ ಪ್ರಮಾಣದ ಹಿಂಬಾಕಿ ಮೊತ್ತವನ್ನು ಪಾವತಿಸಲಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ಮತ್ತು ಅಶತ್ಥನಾರಾಯಣ ಸರ್ಕಾರಕ್ಕೆ ಪ್ರಶ್ನಿಸಿದರು. ಈ ತಿಂಗಳ ಅAತ್ಯದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಖಂಡಿತವಾಗಿ ಸಮಸ್ಯೆಗೆ ಒಂದು ಸಮಾಧಾನಕರ ಪರಿಹಾರವನ್ನು ಕಂಡುಕೊಳ್ಳುತ್ತೇವೆ. ನೌಕರರು ಮುಷ್ಕರ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಕಾರ್ಮಿಕ ಸಚಿವರು ಭರವಸೆಯಿಂದ ಹೇಳಿದರು.