ಬೆಳಗಾವಿ : ವಂಟಮೂರಿಯಲ್ಲಿ ಮಹಿಳೆ ವಿಶಸ್ತ್ರ ಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ಆತಂಕಕ್ಕೆಡೆ ಮಾಡಿ ಕೊಟ್ಟಿದೆ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು,ಸಂತ್ರಸ್ತ ಮಹಿಳೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಅವರಿಗೆ ದೂರು ನೀಡಿದ್ದಾರೆ.
ಎಸ್ಪಿ ಸೂಚನೆ ಮೇರೆಗೆ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಕಲ್ಲಪ್ಪ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ್, ಸಾಧಿಕ್, ಇಸ್ಮಾಯಿಲ್ ಸೇರಿ ೨೦ ಜನರ ಮೇಲೆ ಐಪಿಸಿ ಸೆಕ್ಷನ್ ೧೮೬೦ರಡಿ ೧೪೩, ೧೪೭, ೩೫೪(ಚಿ), ೩೫೪(b), ೩೨೩, ೩೨೪, ೩೮೪, ೨೦೧, ೪೨೭, ೩೪೨, ೩೦೭, ೫೦೪, ೫೦೫, ೧೪೯ರಡಿ ದೂರು ದಾಖಲಾಗಿದೆ.
ಮಹಿಳೆಯ ಜಮೀನಿನಲ್ಲಿ ಪೈಪ್ ಲೈನ್ ವೊಂದು ಹಾದುಹೋಗಿತ್ತು. ಪೈಪ್ ಲೈನ್ ನಿಂದ ಬೆಳೆಹಾನಿಯಾಗುತ್ತಿದೆ, ಹೀಗಾಗಿ ಇದನ್ನು ತೆರವುಗೊಳಿಸುವಂತೆ ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದ್ದರು.
ಹಲವು ಬಾರಿ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ವಿಚಾರವಾಗಿ ಮಹಿಳೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ಮಹಿಳೆ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಸಿದ್ದನು. ನಂತರ ಮತ್ತೆ ಮಹಿಳೆ ಜೊತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಗಲಾಟೆ ಮಾಡಿದ್ದರು. ಈ ವೇಳೆ ತನ್ನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ.


