ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಸಿ.ಪಿ ಯೋಗೇಶ್ವರ್ ಅವರಿಂದು ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಪಿ ಯೋಗೇಶ್ವರ್ ಅವರು ವಿಧಾನ ಪರಿಷತ್ನ ನಾಮನಿರ್ದೇಶಿತ ಬಿಜೆಪಿ ಸದಸ್ಯರಾಗಿದ್ದು, ಈ ಬಾರಿ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಜೆಡಿಎಸ್ ಕ್ಷೇತ್ರವನ್ನು ಬಿಟ್ಟುಕೊಡದಿರಲು ನಿರ್ಧರಿಸಿದೆ. ಅಲ್ಲದೇ ಹೈಕಮಾಂಡ್ ಸಹ ಜೆಡಿಎಸ್ ಕ್ಷೇತ್ರವಾಗಿದ್ದರಿಂದ ಅವರಿಗೆ ಬಿಟ್ಟುಕೊಟ್ಟಿದೆ. ಇನ್ನು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಸಹ ಸಿಪಿ ಯೋಗೇಶ್ವರ್ಗೆ ಆಫರ್ ನೀಡಿದ್ದರು. ಆದ್ರೆ, ಸಿಪಿ ಯೋಗೇಶ್ವರ್ ಜೆಡಿಎಸ್ನಿಂದ ಸ್ಪರ್ಧಿಸಲು ನಿರಾಕರಿಸಿದ್ದು, ಇದೀಗ ಬಿಜೆಪಿಯ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಜೆ ನಾಲ್ಕು ಗಂಟೆ ಸುಮಾರಿಗೆ ಹುಬ್ಬಳ್ಳಿಗೆ ತೆರಳಿದ ಯೋಗೇಶ್ವರ್, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿಪಿವೈ ನಿರ್ಧರಿಸಿದ್ದರು. ಕೊನೇ ಕ್ಷಣದವರೆಗೂ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿಪಿವೈಗೆ ಬಿಜೆಪಿ ಕಡೆಯಿಂದ ಯಾವುದೇ ಶುಭ ಸುದ್ದಿ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಸದಸ್ಯತ್ವಕ್ಕೆ (MLC) ರಾಜೀನಾಮೆ ನೀಡಿದ್ದಾರೆ.


