ಬೆಂಗಳೂರು : ಅಜೇಯ್ ರಾವ್ ನಟಿಸಿ, ನಿರ್ಮಿಸಿರುವ ಯುದ್ಧಕಾಂಡ ಸಿನಿಮಾ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕೃಷ್ಣಲೀಲಾ ಸಿನಿಮಾ ನಂತರ ಅಜೇಯ್ ನಿರ್ಮಿಸುತ್ತಿರುವ ಎರಡನೇ ಸಿನಿಮಾವಿದು. ಈ ಸಿನಿಮಾ ಮೂಲಕ ನಿರ್ಮಾಪಕರಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿರುವ ಅಜೇಯ್ ರಾವ್, ಈ ಸಿನಿಮಾಗಾಗಿ ತಮ್ಮ ನೆಚ್ಚಿನ ಬಿಎಂಡಬ್ಲ್ಯೂ ಕಾರನ್ನು ಮಾರಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಅಚ್ಚರಿ ಎನಿಸಿದರೂ ಇದು ನಿಜ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಯುದ್ಧಕಾಂಡ ಸಿನಿಮಾವನ್ನು ತಮ್ಮ ಮಗಳಾದ ಚೆರಿಷ್ಮಾಗಾಗಿ ನಿರ್ಮಾಣ ಮಾಡುತ್ತಿರುವುದಾಗಿ ಇತ್ತೀಚೆಗೆ ಅಜೇಯ್ ರಾವ್ ಹೇಳಿಕೊಂಡಿದ್ದರು. ಹಾಗೆಯೇ ಈ ಸಿನಿಮಾ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದರ ಬಗ್ಗೆಯೂ ಮಾತನಾಡಿದ್ದರು. ಯುದ್ಧಕಾಂಡ ಸಿನಿಮಾವನ್ನು ತಾವೇ ನಿರ್ಮಾಣ ಮಾಡುತ್ತಿರುವುದರಿಂದ ಬಂಡವಾಳಕ್ಕೆ ಹಣದ ಕೊರತೆ ಎದುರಾದಾಗ ತಮ್ಮ ನೆಚ್ಚಿನ ಬಿಎಂಡಬ್ಲ್ಯೂ ಕಾರನ್ನು ಮಾರಿದ್ದಾರೆ ಎಂದು ತಿಳಿದುಬಂದಿದೆ.
ಖರೀದಿದಾರರು ಈ ಕಾರನ್ನು ತೆಗೆದುಕೊಂಡು ಹೋಗಲು ಬಂದಾಗ ಅಜೇಯ್ ರಾವ್ ಪುತ್ರಿ ಚೆರಿಷ್ಮಾ ಬಿಕ್ಕಳಿಸಿ ಕಣ್ಣೀರು ಹಾಕಿದ್ದಾಳೆ. ಅಜೇಯ್ ಪುತ್ರಿ ಸಿಕ್ಕಾಪಟ್ಟೆ ಅತ್ತಿರುವುದನ್ನು ನೋಡಿದರೆ ಎಂಥವರನ್ನೂ ಭಾವುಕರನ್ನಾಗಿಸುತ್ತದೆ. ಅಜೇಯ್ ಅವರ ಪುತ್ರಿಗೆ `ಮತ್ತೆ ಇದೇ ರೀತಿಯ ಕಾರು ತಗೋಳೋಣ’ ಎಂಬ ಭರವಸೆ ನೀಡಿರುವ ಮಾತುಗಳೂ ಈ ವಿಡಿಯೋದಲ್ಲಿದೆ.


