ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ದಿನಕೊಂದು ಹೇಳಿಕೆ ನೀಡುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ . ಎರಡೂವರ್ಷಗಳ ಬಳಿಕ ಸಿಎಂ ಹುದ್ದೆ ಹಂಚಿಕೆ ಗೊಂದಲಕ್ಕೆ ತೆರೆ ಎಳೆಯಲು ಹೋಗಿ ಸಿಎಂ ಸಿದ್ದರಾಮಯ್ಯ ಹೊಸ ವಿವಾದಕ್ಕೆ ನಾಂದಿ ಹಾಡಿದರೇ? ಇಂತಹದ್ದೊAದು ಅನುಮಾನಕ್ಕೆ ‘ನಾನೇ ಸಿಎಂ ಎಂದು ಹೇಳಿಯೇ ಇಲ್ಲ’ ಎಂದು ಯೂಟರ್ನ್ ಹೊಡೆದಿ ರುವುದು ಪುಷ್ಟಿ ನೀಡಿದೆ.
ಮೂಲಗಳ ಪ್ರಕಾರ ಸಿದ್ದು ಹೇಳಿಕೆಗೆ ಹೈಕಮಾಂಡ್ ಸಿಡಿಮಿಡಿಗೊಂಡಿದ್ದರ ಪ್ರತಿಫಲವೇ ಗುರುವಾರ ಕೊಟ್ಟಿದ್ದ ಹೇಳಿಕೆ ಶುಕ್ರವಾರದ ಹೊತ್ತಿಗೆ ತಿದ್ದುಪಡಿ ಮಾಡಿಕೊಳ್ಳುವ ಹಂತಕ್ಕೆ ತಲುಪಿಸಿದೆ ಎನ್ನಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿದ ಸಿ.ಎಂ. ನಿನ್ನೆ ಹೌದಪ್ಪಾ ಇಂದು ಇಲ್ಲಪ್ಪಾ: ‘ನಾನೀಗ ಮುಖ್ಯಮಂತ್ರಿ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ಐದು ವರ್ಷಗಳ ಕಾಲ ನಮ್ಮದೇ ಸರ್ಕಾರ’ ಹೀಗೆಂದು ಹೊಸಪೇಟೆಯಲ್ಲಿ ಗುರುವಾರ ಗಟ್ಟಿಧ್ವನಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಶುಕ್ರವಾರ ಗದಗ್‌ನಲ್ಲಿ ಮಾತನಾಡಿದ ಅವರು, ‘ಐದು ವರ್ಷ ನಾನೇ ಮುಖ್ಯಮಂತ್ರಿ ಎAದು ನಾನು ಎಲ್ಲಿಯೂ ಹೇಳಿಲ್ಲ. ನಾನು ಹೇಳಿದ್ದೇ ಒಂದು ನೀವು ಬರೆದಿದ್ದೇ ಇನ್ನೊಂದು’ ಎಂದು ಮಾಧ್ಯಮಗಳನ್ನೇ ಸಿಎಂ ದೂಷಿಸಿದರು.
ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಅವರದ್ದೇ ಅಂತಿಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು.
ನೀವೇ ಸರಿಮಾಡಿ ವರಿಷ್ಠರ ಸೂಚನೆ: ಅಷ್ಟಕ್ಕೂ ಸಿಎಂ ಹೇಳಿಕೆ ಬದಲಿಸಲು ಕಾರಣವೇನು? ಎಂಬುದು ಕುತೂಹಲ ಮೂಡಿಸಿದೆ. ನಾನೇ ಸಿಎಂ ಎಂಬ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ ವಿಷಯ ದೆಹಲಿ ವರಿಷ್ಠರ ಅಂಗಳ ತಲುಪಿದೆ. ಇದರಿಂದ ಸಿಡಿಮಿಡಿಗೊಂಡ ವರಿಷ್ಠರು ಏನಿದು? ಎಂದು ಸಿಎಂಗೆ ನೇರ ಪ್ರಶ್ನೆ ಮಾಡಿದ್ದಾಗಿ ಹೇಳಲಾಗಿದೆ.
ನಾನು ಹಾಗೇ ಹೇಳಿಯೇ ಇಲ್ಲ ಎನ್ನುವ ಸಮರ್ಥನೆಗೆ ಮುಂದಾದ ಸಿದ್ದರಾಮಯ್ಯ ಅವ ರಿಗೆ ಆಗಿರುವುದನ್ನು ನೀವೇ ಸರಿಮಾಡಿ ಎಂದು ಸೂಚ್ಯವಾಗಿ ವರಿಷ್ಠರಿಂದ ಸಿಕ್ಕಿದ ಸಂದೇಶದAತೆ ಗುರುವಾರ ನೀಡಿದ್ದ ಹೇಳಿಕೆ ಶುಕ್ರವಾರದ ಹೊತ್ತಿಗೆ ತಿರುವುಮುರುವಾಗಿದೆ ಎಂದು ಮೂಲಗಳು ಖಾತರಿಪಡಿಸಿವೆ.
ಮಂತ್ರಿ ಕೂಡಾ ಯೂಟರ್ನ್: ಇನ್ನೊಂದೆಡೆ ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ಖರ್ಗೆ ಅವರು ಹೈಕಮಾಂಡ್ ಹೇಳಿದರೆ ಸಿಎಂ ಆಗಲು ಸಿದ್ದ ಎಂದಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಅವರೂ ಉಲ್ಟಾ ಹೊಡೆದಿದ್ದು ಹೈಕಮಾಂಡ್ ನಿಮ್ಮನ್ನು (ವರದಿಗಾರ) ಸಿಎಂ ಎಂದು ಹೇಳಿದರೆ ನಾನೂ ಒಪ್ಪಬೇಕು ಎಂಬರ್ಥದಲ್ಲಿ ಹೇಳಿದ್ದೇನೆ. ಇದನ್ನು ವಿವಾದ ಮಾಡುವುದು ಬೇಡ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ್ದನ್ನು ಕೇಳುವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ಮಾತ್ರವಲ್ಲದೆ ಸಂಪುಟದ ಮಂತ್ರಿಯೂ ಯೂಟರ್ನ್ ತೆಗೆದುಕೊಂಡಿದ್ದು ಮಾತ್ರ ದಿನದ ರಾಜಕೀಯ ವಿದ್ಯಮಾನಗಳ ವಿಶೇಷವಾಗಿದೆ.
ರಾಜಣ್ಣ ಯಾರಿಗೂ ಹೆದರಲ್ಲ: ಇದೆಲ್ಲದರ ನಡುವೆಯೇ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಿಎಂ ಬದಲಾವಣೆ ವಿಷಯವನ್ನು ಪುನರುಚ್ಚರಿಸಿದ್ದಾರೆ. ಸಿದ್ದರಾಮಯ್ಯ ಬಿಟ್ಟರೆ ಸಿಎಂ ಅರ್ಹತೆ ಇರುವುದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮಾತ್ರ ಎಂದಿದ್ದಾರೆ. ವರಿಷ್ಠರು ಮಾತನಾಡಬೇಡಿ ಎಂದಿದ್ದಾರೆ. ಆದರೆ ಹೇಳಬೇಕಾದ್ದನ್ನು ಹೇಳಿಯೇ ಹೇಳುತ್ತೇನೆ ನಾನು ಯಾರಿಗೂ ಹೆದರುವುದಿಲ್ಲ ಎನ್ನುವ ಮೂಲಕ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದಾರೆ.